ಶಿಥಿಲ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿಕೆ

MLA
ಹರಪನಹಳ್ಳಿಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಸಸ್ಯ ಶ್ಯಾಮಲ ಯೋಜನೆಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಸಿಗೆ ನೀರೆರೆವ ಮೂಲಕ ಮೂಲಕ ಚಾಲನೆ ನೀಡಿದರು. ಪುರಸಭೆ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಹೇಬ್, ಬಿಇಒ ಯು.ಬಸವರಾಜಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ತೋಷನ್ ಕುಮಾರ, ಗ್ರೇಡ್-2 ತಹಸೀಲ್ದಾರ್ ನಟರಾಜ, ಎಸ್‌ಡಿಎಂಸಿ ಅಧ್ಯಕ್ಷ ರಸೂಲ್ ಸಾಹೇಬ್, ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಪರಸಪ್ಪ ಭಜಂತ್ರಿ ಇದ್ದರು.
Published on

ಹರಪನಹಳ್ಳಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ತಾಲೂಕಿನ ಶಿಥಿಲ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಬಾಣಗೇರಿ ಉರ್ದು ಪ್ರೌಢ ಶಾಲೆಯಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಈಗಾಗಲೇ ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಕಾಂಪೌಂಡ್, ಶೌಚಗ್ರಹ, ಬಿಸಿಯೂಟ ತಯಾರಿ ಕೊಠಡಿಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಜನವರಿ ಹೊತ್ತಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ ಇದೆ ಎಂದ ಅವರು, 198 ಶಾಲಾ ಕೊಠಡಿಗಳ ದುರಸ್ತಿಗೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಬೇಕು. ಇಲ್ಲದಿದ್ದರೆ ನಾನೇ ವರ್ಗಾವಣೆ ಮಾಡಿಸಿಕೊಡುತ್ತೇನೆ ಹೋಗಿ ಬಿಡಿ ಎಂದ ಶಾಸಕರು, ತಾಲೂಕಿನಲ್ಲಿ ಐತಿಹಾಸಿಕ ಕಲ್ಯಾಣಿಗಳ ಪುನರುಜ್ಜೀವನ ಕೈಗೊಂಡಿದ್ದೇವೆ. ಹಾರಕನಾಳು ಸಣ್ಣ ತಾಂಡಾ, ದೊಡ್ಡ ತಾಂಡಾ ಹಾಗೂ ಚನ್ನಹಳ್ಳಿ ತಾಂಡಾಗಳಲ್ಲಿ ಅಮೃತಧಾರೆ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದರು. ಸಸ್ಯ ಶ್ಯಾಮಲ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ರಾಜ್ಯದ ಶಾಲಾ ಕಾಲೇಜುಗಳಲ್ಲಿ 50 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಹರಪನಹಳ್ಳಿ ತಾಲೂಕು ಡಿಎಂಎಫ್ ಯೋಜನೆಯ ಅನುದಾನದಿಂದ ಕೈಬಿಟ್ಟು ಹೋಗಿತ್ತು. ನಾನು ಸಂಬಂಧಪಟ್ಟ ಸಚಿವರ ಬಳಿ ಮಾತನಾಡಿ ತಾಲೂಕನ್ನು ಜಿಲ್ಲಾ ಖನಿಜ ಅನುದಾನದಡಿ ಸೇರಿಸಲು ಪ್ರಯತ್ನ ನಡೆಸಿದ್ದೇನೆ. ಒಟ್ಟಿನಲ್ಲಿ ತಾಲೂಕನ್ನು ಸಮಗ್ರ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇನೆ. ಇದಕ್ಕೆ ಸರ್ವರೂ ಸಹಕರಿಸಬೇಕೆಂದು ಕೋರಿದರು.

ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಮಾತನಾಡಿ, ಸಸಿ ನೆಡುವುದು, ಬೆಳೆಸುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಪ್ರತಿಯೊಬ್ಬರೂ ಸಸಿ ಬೆಳೆಸಿ ಪರಿಸರ ಉಳಿಸಬೇಕಾಗಿದೆ. ತಾಲೂಕಿನಲ್ಲಿ 24500 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶವಿದೆ. ಕರಡಿ, ಚಿರತೆ ಸೇರಿ ಅನೇಕ ಪ್ರಾಣಿಗಳು ಕಾಣಸಿಗುತ್ತವೆ. ಇವುಗಳ ರಕ್ಷಣೆಗೆ ಜತೆಗೆ ಮುಂದಿನ ಪೀಳಿಗೆಗೆ ಅರಣ್ಯವನ್ನು ಬಿಟ್ಟುಹೋಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net