

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭಾನುವಾರ ದೇವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ 2 ವರ್ಷದ ಸಾಧನೆ ಸಮಾವೇಶದ ವೇದಿಕೆಯಿಂದ ಅಂತರ ಕಾಯ್ದುಕೊಂಡಿದ್ದ ದೊಡ್ಡಬಳ್ಳಾಪುರದ ಶಾಸಕ ದೀರಜ್‌ಮುನಿರಾಜು ಸಿಎಂ ಸ್ವಾಗತದ ಸಮಯದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿದ್ದಾರೆ.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾವೇಶದಲ್ಲಿ ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆಯೇ ವೇದಿಕೆಯಲ್ಲಿ ಹೆಚ್ಚು ಸದ್ದು ಕೇಳಿಬಂತು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ದೊಡ್ಡಬಳ್ಳಾಪುರ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಇಂಬು ನೀಡುವಂತೆ ಶಾಸಕ ದೀರಜ್ ಮುನಿರಾಜು ಮನವಿ ಪತ್ರ ನೀಡಿ ಕಾರ್ಯಕ್ರಮದಿಂದ ದೂರ ಉಳಿದಿರುವುದು ಸುದ್ದಿಗೆ ಗ್ರಾಸವಾಗಿದೆ.
2024-25 ಬಜೆಟ್‌ನಲ್ಲಿ ನಗರವನ್ನು ‘ಸ್ಯಾಟೆಲೈಟ್ ಟೌನ್’ ಆಗಿ ಪರಿವರ್ತಿಸುವುದಾಗಿ ಘೋಷಣೆಯಾಗಿತ್ತು. 2025-26ರ ಬಜೆಟ್‌ನಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾಸ್ಪತ್ರೆ ಮಂಜೂರಾಗಿದ್ದರೂ ಇದುವರೆಗೂ ಸರ್ಕಾರದಿಂದ ಅನುದಾನ ನೀಡಿರುವುದಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಸ್ಮಾಟಲೈಟ್ ನಗರ ಹಾಗೂ ಇತರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ಅನುದಾನ ಮೀಸಲಿಟ್ಟು ಕಾಮಗಾರಿ ಪ್ರಾರಂಭಿಸಬೇಕು. ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ ನೀಡುವ ಮೂಲಕ ಶೀಘ್ರದಲ್ಲಿ ಕಾಮಗಾರಿ ಪೂರೈಸಿ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲೇ ಮಾಡಬೇಕು. ‘ಟ್ರಾಮಾ ಕೇರ್ ಸೆಂಟರ್’ ಪ್ರಾರಂಭಿಸಲು ಇದ್ದ ಪ್ರಸ್ತಾವನೆಯು ಕಾರ್ಯಗತಗೊಂಡಿಲ್ಲ ಎಂಬುದು ಈ ಪತ್ರದಲ್ಲಿನ ದೂರಾಗಿದೆ.
ಕಾವೇರಿ ಕೊಡಿ: ದೇವನಹಳ್ಳಿ ಹಾಗೂ ವಿಜಯಪುರಕ್ಕೇ ಕಾವೇರಿ ನೀರು ಹರಿಸುವ ಬಗ್ಗೆ ವೇದಿಕೆಯಲ್ಲಿ ಭರವಸೆ ಸಿಕ್ಕಿದೆ, ಆದರೆ ದೊಡ್ಡಬಳ್ಳಾಪುರದ ಬಗ್ಗೆ ಯಾವುದೇ ಸೊಲ್ಲಿಲ್ಲ. ಈ ಬಗ್ಗೆ ಉಲ್ಲೇಖಿಸಿರುವ ಶಾಸಕರು
ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರಿನ ಬೇಡಿಕೆ ಇಟ್ಟಿದ್ದಾರೆ. ಅಂತರ್ಜಲ ಕಲುಷಿತಗೊಳಿಸಿದ್ದೇ ಈ ಸರ್ಕಾರದ ಸಾಧನೆ ಎಂದು ಟೀಕಿಸಿರುವ ಶಾಸಕರು ತಾಲೂಕಿನಲ್ಲಿ ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಕಲುಷಿತವಾಗಿದೆ. ಅಧಿವೇಶನದಲ್ಲಿ ಈ ಸಮಸ್ಯೆ ಪ್ರಸ್ತಾಪಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಮೂಲ ಸೌಕರ್ಯವಾಗಿದೆ. ನಗರ ಸಭೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಕೂಡಲೇ ಅನುದಾನ ಮೀಸಲಿಟ್ಟು ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.
ಘಟಕ ಆರಂಭಿಸಿದರೆ ಸತ್ಯಾಗ್ರಹ: 2015 ಟೆರ್ರಾ ಫಾರಂ ಕಸ ವಿಲೇವಾರಿ ಘಟಕ ಮುಚ್ಚಲಾಗಿತ್ತು. ಇದೀಗ ಇದೇ ಘಟಕ ಪುನರಾರಂಭಿಸುವ ಕುರಿತಾಗಿ ಪ್ರಸ್ತಾವನೆ ಇದೆ. ಹೈಕೊರ್ಟ್ ತೀರ್ಪಿನಂತೆ ಹಾಗೂ ಕಳೆದ ಬಾರಿ ತಾವೇ ಮುಚ್ಚಿಸಿದ ಟೆರ್ರಾಫಾರ್ಮಾ ಕಸದ ಘಟಕ ಯಾವುದೇ ಕಾರಣಕ್ಕೂ ಪುನರಾರಂಭ ಮಾಡಬಾರದು. ಒಂದು ವೇಳೆ ಘಟಕ ಪುನರಾರಂಭ ಮಾಡಿದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ದೇವನಹಳ್ಳಿ ಕ್ಷೇತ್ರಕ್ಕೆ 2500 ಮನೆಗಳ ಮಂಜೂರಾತಿ ನೀಡಿರುವ ಸರ್ಕಾರ ದೊಡ್ಡಬಳ್ಳಾಪುರಕ್ಕೆ ಖಾಲಿ ಕೈ ತೋರಿಸಿದೆ. 2004 ರಿಂದ ಆಗಿರುವ ಲೋಪ ಸರಿಪಡಿಸಿ ವಸತಿ ಹೀನರಿಗೆ ಕೂಡಲೇ ವಸತಿ ಭಾಗ್ಯ ಕಲ್ಪಿಸಿಬೇಕು ಎಂಬುದು ಮನವಿ ಪತ್ರದಲ್ಲಿನ ಅಗ್ರ ಬೇಡಿಕೆಯಾಗಿದೆ. ಭೌಗೋಳಿಕವಾಗಿ, ಜಿಲ್ಲೆಯ ಕೇಂದ್ರ ಪ್ರದೇಶದಲ್ಲಿರುವ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಮುಂದಿನ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಕೋರಿದ್ದಾರೆ.