ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ನೀಲನಕ್ಷೆ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

MLA launches development work Mandya
Published on

ಮಂಡ್ಯ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಗರಕ್ಕೆ ಮೂಲ ಸೌಕರ್ಯ ಸೇರಿದಂತೆ ಹೈಟೆಕ್ ಸ್ಪರ್ಶ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ 7.50 ಲಕ್ಷ ರೂ ವೆಚ್ಚದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿ ಉದ್ಯಾನದ ಮುಖ್ಯದ್ವಾರ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಹಾಗೂ 20 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಡ್ಯ ನಗರವನ್ನು ಬೇರೆಯವರು ತಿರುಗಿ ನೋಡುವಂತೆ ಮಾಡಲು ಅಭಿವೃದ್ಧಿ ಕಾರ್ಯಗಳ ನೀಲನಕ್ಷೆ ತಯಾರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಒಟ್ಟಾರೆ ಮಂಡ್ಯ ನಗರವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, 20 ಕೋಟಿ ರೂ ಅನುದಾನದಲ್ಲಿ ನವ ಮಂಡ್ಯದ ಕನಸು ನನಸಾಗಲಿದೆ ಎಂದು ಹೇಳಿದರು.

ನಡೆದಾಡಿದ ದೇವರು ಸಿದ್ದಗಂಗಾ ಶ್ರೀಗಳ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾಯಕಯೋಗಿ ಸಂಸ್ಥೆಯವರು ಕಳೆದ ಹಲವಾರು ವರ್ಷದಿಂದ ಹಸಿರೀಕರಣದ ಕಾಯಕದಲ್ಲಿ ನಿರತರಾಗಿರುವುದು ಶ್ಲಾಘನೀಯ. ಇಲ್ಲಿನ ವಾಯುವಿಹಾರಿ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಧ್ಯಾನಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಸ್ವಾಮೀಜಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕೆಂದು ಮುಖ್ಯದ್ವಾರವನ್ನು ಆಕರ್ಷಕವಾಗಿ ಮಾಡಲಾಗುತ್ತಿದ್ದು, ಈಗಾಗಲೇ 5 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಮೂಲ ಸೌಕರ್ಯ ಸೇರಿದಂತೆ ಉದ್ಯಾನದ ಲೈಟಿಂಗ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ನಗರಕ್ಕೆ ಮೂಲ ಸೌಕರ್ಯ ಒದಗಿಸಲು ಅನುದಾನ ತರಲಾಗುತ್ತಿದೆ. ಆ ಮೂಲಕ ಜನರ ಆಶಯಗಳನ್ನು ಈಡೇರಿಸಲಾಗುವುದು ಎಂದರು.

ಮಂಡ್ಯ ನಗರದಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಬಸವ ಭವನ ನಿರ್ಮಾಣ ಮಾಡಲು 50 ಲಕ್ಷ ರೂ ಅನುದಾನ ನೀಡಲು ಸಿದ್ಧನಿದ್ದೇನೆ. ಲಿಂಗಾಯತರ ಸಮಾವೇಶದಲ್ಲಿ ಕೆಲವು ಮುಖಂಡರು ಬಸವ ಭವನ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಸಮುದಾಯದ ಮುಖಂಡರು ಸಭೆ ನಡೆಸಿ ಜಾಗ ಗುರುತಿಸಿಕೊಟ್ಟಲ್ಲಿ ಶೀಘ್ರವೇ ಬಸವಭವನ ನಿರ್ಮಾಣ ಮಾಡಲಾಗುವುದು ಎಂದರು.

ಪೌರಾಯುಕ್ತೆ ಪಂಪಶ್ರೀ, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಮುಖಂಡ ಎಂ.ಆರ್.ಮಂಜುನಾಥ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಕಾಂಗ್ರೆಸ್ ಮುಖಂಡ ಶಿವನಂಜು, ಸೋಮಶೇಖರ್, ಸುರೇಶ್, ತಿಲಕ್‌ರಾಜ್, ಮಂಜುನಾಥ್, ಕೆಂಪಣ್ಣ, ಮಲ್ಲಿಕಾರ್ಜುನಯ್ಯ, ಜಿ.ಮಹಾಂತಪ್ಪ, ಶಿವರಾಂ, ಎಚ್.ಕೆ.ರುದ್ರಪ್ಪ, ಸುಮನ್, ಗುತ್ತಿಗೆದಾರ ಭೈರಪ್ಪ, ಬಸರಾಳು ಬಸವರಾಜ್ ಇತರರಿದ್ದರು.

ಕಾಮಗಾರಿ ಪರಿಶೀಲನೆ: ಹಾಲಹಳ್ಳಿ ಸತ್ಯಹರಿಶ್ಚಂದ್ರ ವೃತ್ತ, ಭೋವಿ ಕಾಲನಿ 3ನೇ ಕ್ರಾಸ್‌ನಲ್ಲಿರುವ ಶ್ರೀನಿವಾಸ ದೇವಸ್ಥಾನದ ಹಿಂಭಾಗ, ಗುತ್ತಲು ಬಡಾವಣೆ ಹಾಗೂ 30ನೇ ವಾರ್ಡ್ ಅರ್ಕೇಶ್ವರನಗರ ಥೇರಿನ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ರವಿಕುಮಾರ್ ಗಣಿಗ ಪರಿಶೀಲಿಸಿದರು. ನಗರಸಭೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net