

ಮಂಡ್ಯ: ಜನರು ಚುನಾವಣೆಯಲ್ಲಿ ಮತ ಕೊಟ್ಟು ಗೆಲ್ಲಿಸಿದ್ದಾರೆ. ಅದರಂತೆ ಅವರಿಗಾಗಿ ಕೆಲಸ ಮಾಡುತ್ತೇನೆ. ನನಗೆ ಮತ ಹಾಕಿರಲಿ ಅಥವಾ ಹಾಕಿರದೇ ಇರಲಿ, ಎಲ್ಲರೂ ನನ್ನನ್ನು ಗೆಲ್ಲಿಸಿದ್ದಾರೆನ್ನುವ ಭಾವನೆಯಿಂದಲೇ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತಿದ್ದೇನೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಚಂದಗಾಲು ಗ್ರಾಮದಲ್ಲಿ 4.50 ಕೋಟಿ ರೂ ವೆಚ್ಚದಲ್ಲಿ ಕೆರೆ ಕೋಡಿ, ತೂಬು ಹಾಗೂ 10ನೇ ವಿತರಣಾ ನಾಲೆಯ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜಕಾರಣ ಮಾಡುತ್ತಿದ್ದರೆ ಏನ್ನೂ ಆಗಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಜನರ ಜೀವನದಲ್ಲಿ ಸಾಧ್ಯವಾದಷ್ಟು ಸುಧಾರಣೆ ಮಾಡಬೇಕು. ಅದೇ ನಿಜವಾದ ರಾಜಕಾರಣ ಎಂದರು.
ಗ್ರಾಮಾಂತರ ಭಾಗದಲ್ಲಿರುವ ಜನರ ಜೀವನ ಮಟ್ಟ ಸುಧಾರಿಸಬೇಕು. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ, ನಾಲೆಗಳ ದುರಸ್ಥಿ ಕಾಮಗಾರಿ ನಡೆಯಬೇಕು. ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ರೈತರ ಹೊಲ ಗದ್ದೆಗಳು ಸೇರಿದರೆ ರೈತರು ನೆಮ್ಮದಿಯಿಂದ ಕೃಷಿ ಮಾಡುತ್ತಾರೆ. ಮಾತ್ರವಲ್ಲದೆ ಬೇಸಾಯದಲ್ಲಿ ಆದಾಯ ಕಂಡು ಜೀವನದಲ್ಲಿ ಸುಧಾರಣೆ ಕಾಣಬಹುದು. ಅಂತೆಯೇ ಅವರ ಆರ್ಥಿಕ ಮಟ್ಟ ಸುಧಾರಿಸಿದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ನಾವು ಇರುತ್ತೇವೋ, ಇಲ್ಲವೋ ಆದರೆ ನಾವು ಮಾಡಿದ ಕೆಲಸ ಶಾಶ್ವತ ಎಂದು ಹೇಳಿದರು.
ನಂದಳ್ಳಿ ಗ್ರಾಮದಲ್ಲಿ 250 ಮತದಾರರಿದ್ದಾರೆ. ನಂದಳ್ಳಿಯಿಂದ ಹಟ್ನಾದವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ ಬೇಕಾಗಿದೆ. ಇರುವ ಮತಗಳಲ್ಲಿ ನನಗೆ ಕೇವಲ 50 ಮತ ಮಾತ್ರ ಬಂದಿವೆ. ಆದರೆ ಯಾರೂ ಈ ರಸ್ತೆಯನ್ನು ಸುಧಾರಣೆ ಮಾಡಲಿಲ್ಲ. ನಾನೂ ಮಾಡದಿದ್ದರೆ ಇನ್ಯಾರೂ ಮಾಡಲು ಸಾಧ್ಯವಿಲ್ಲವೆಂದು ಭಾವಿಸಿ ಆ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ. ಹಲ್ಲೆಗೆರೆಯಿಂದ ಗಣಿಗ ಗ್ರಾಮದವರೆಗೆ 100 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಿದ್ದೇವೆ. ಯಾವ ಮಂತ್ರಿಯೂ ಮಾಡದ ಕೆಲಸವನ್ನು ಶಾಸಕನಾಗಿ ಮಾಡಿದ್ದೇನೆ. ಎರಡು ವರ್ಷಕ್ಕೆ ಇಷ್ಟು ಅಭಿವೃದ್ಧಿ ಮಾಡಿದ್ದೇವೆ. ಇನ್ನೂ ಮೂರು ವರ್ಷಗಳಲ್ಲಿ 500 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ, ಗುತ್ತಿಗೆದಾರ ಪ್ರಕಾಶ್, ಮುಖಂಡರಾದ ಶಿವರಾಮು, ಕರಿಯಪ್ಪ, ಶಂಕರೇಗೌಡ, ಚಿಕ್ಕಬೋರಯ್ಯ, ಆನಂದ್, ಮಣಿ, ಪಿಡಿಒ ಅಶ್ವಿನಿ ಇತರರಿದ್ದರು.
ಶಾಸಕರಿಗೆ ಅಪಾರ ಕಾಳಜಿ
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಶಾಸಕ ರವಿಕುಮಾರ್ ಗಣಿಗ ಅವರಿಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆನ್ನುವ ಹಂಬಲವಿದೆ. ಅವರ ಕಾಳಜಿಗೆ ಅಭಿನಂದನೆ ಸಲಿಸುತ್ತೇನೆ. ಪಕ್ಷ, ರಾಜಕೀಯವನ್ನು ಚುನಾವಣೆ ಸಮಯದಲ್ಲಿ ಮಾಡೋಣ. ನಂತರ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಂದಾಗೋಣ ಎಂದರು.
ಚಂದಗಾಲು ಗ್ರಾಮದಲ್ಲಿ ಕೆರೆ ಕೋಡಿ ಅಭಿವೃದ್ಧಿಯಾಗಿ 40 ವರ್ಷವಾಗಿತ್ತು. ನೀರಾವರಿ ಇಲಾಖೆಯಿಂದ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಎರಡು ಸಿ.ಸಿ ರಸ್ತೆಯಾಗಿವೆ. ಇನ್ನುಳಿದ ರಸ್ತೆಯನ್ನು ಸಿ.ಸಿ ರಸ್ತೆಯನ್ನಾಗಿ ಮಾಡುತ್ತಾರೆ. ಈ ರೀತಿ ನಿರಂತರವಾಗಿ ಅಭಿವೃದ್ಧಿ ಕೆಲಸ ಮಾಡುವ ಶಾಸಕರಿಗೆ ಯಾವಾಗಲೂ ಎಲ್ಲರೂ ಬೆಂಬಲವಾಗಿ ನಿಲ್ಲೋಣ. ಮುಂದೆ ನೂರಾರೂ ಕೋಟಿ ರೂ ಅನುದಾನ ತಂದು ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.