

ಪಾಂಡವಪುರ : ತಾಲೂಕು ಆಡಳಿತದ ಕಚೇರಿಯಲ್ಲಿನ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಮಧ್ಯವರ್ತಿಗಳನ್ನು ಅವಲಂಬಿಸಬಾರದು. ರೈತರು ಮತ್ತು ಸಾರ್ವಜನಿಕರ ಕಚೇರಿ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳು ಹಣ ಪಡೆಯುವುದು ತಿಳಿದು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ದಲ್ಲಾಳಿಗಳಿಗೆ ನೇರ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಆಡಳಿತದ ಕಟ್ಟಡದಲ್ಲಿರುವ ಶಾಸಕರ ಕಚೇರಿಗೆ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿದ ವೇಳೆ ಸಾರ್ವಜನಿರು ದಲ್ಲಾಳಿಗಳ ಹಾವಳಿ ಮತ್ತು ವರ್ತನೆ ಬಗ್ಗೆ ದೂರು ನೀಡಿ ಕ್ರಮ ವಹಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ತಮ್ಮದಲ್ಲದ ಕೆಲಸ ಕಾರ್ಯಗಳಿಗೆ ಕಚೇರಿಗೆ ಪ್ರತಿನಿತ್ಯ ಕಚೇರಿಗೆ ಆಗಮಿಸುವ ದಲ್ಲಾಳಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮ ಸ್ವತಃ ಕೆಲಸ ಕಾರ್ಯಗಳು ಇದ್ದರೆ ಕಚೇರಿಗೆ ಬನ್ನಿ. ನಿಮ್ಮ ಯಾವುದೇ ಕೆಲಸ ಕಾರ್ಯಗಳು ಇಲ್ಲವೆಂದ ಮೇಲೆ ಪ್ರತಿನಿತ್ಯ ತಾಲೂಕು ಕಚೇರಿಯ ಆವರಣದಲ್ಲಿ ಮತ್ತು ಅಧಿಕಾರಿಗಳ ಕೊಠಡಿಗೆ ತೆರಳುವುದು ಯಾಕೆ? ಯಾರಾದರೂ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡುತ್ತಿಲ್ಲ ಎಂದರೆ ಖುದ್ದು ನಾನೇ ನಿಂತು ಆ ಕೆಲಸ ಮಾಡಿಕೊಡುತ್ತೇನೆ. ಅದನ್ನು ಬಿಟ್ಟು ಮಧ್ಯಸ್ಥಿಕೆ ಕೆಲಸ ಬೇಡ. ನಿಮ್ಮಿಂದ ಜನ ನಮಗೆ ಬೈಯುತ್ತಿದ್ದಾರೆ. ಇನ್ನು ಮುಂದೆ ಯಾವೊಬ್ಬ ದಲ್ಲಾಳಿಗಳು ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದು ಕಚೇರಿಗೆ ಬರಬಾರದು ಎಂದು ತಾಕೀತು ಮಾಡಿದರು.
ರೈತರು ತಮ್ಮ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳ ಬಳಿಗೆ ಹೋಗಬಾರದು. ದಲ್ಲಾಳಿಗಳನ್ನು ಅವಲಂಬಿಸಿದರೆ ನಿಮ್ಮ ಕೆಲಸ ಆಗುವುದಿಲ್ಲ. ತಾಲೂಕು ಕಚೇರಿಯ ಅಧಿಕಾರಿಗಳ ಬಳಿಗೆ ತೆರಳಿ ಸೂಕ್ತ ದಾಖಲೆಗಳನ್ನು ನೀಡಿ ನಿಮ್ಮ ಕೆಲಸ ಮಾಡಿಸಿಕೊಳ್ಳಬೇಕು. ತಾಲೂಕು ಕಚೇರಿಯ ಸಿಸಿ ಕ್ಯಾಮರ ಫೂಟೇಜ್‌ಗಳನ್ನು ಗಮನಿಸಿದರೆ ಯಾರ‌್ಯಾರು ದಲ್ಲಾಳಿಗಳು ಯಾರು ಸಾರ್ವಜನಿಕರು ಎಂದು ತಿಳಿಯುತ್ತದೆ. ಅಧಿಕಾರಿಗಳು ಕೂಡ ಮಧ್ಯವರ್ತಿಗಳನ್ನು ಬಂದರೆ ಯಾವುದೇ ಕೆಲಸ ಮಾಡಿಕೊಡಬಾರದು. ಜನರಿಂದ ಸಾವಿರಾರು ವಸೂಲಿ ಮಾಡಿ ಅವರ ಕೆಲಸವನ್ನು ಮಾಡಿಕೊಡದೆ ದಲ್ಲಾಳಿಗಳು ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪಗಳು ಪ್ರತಿನಿತ್ಯ ಕೇಳಿ ಬರುತ್ತಿದೆ. ಇಲ್ಲಿ ಯಾರೇ ದಲ್ಲಾಳಿಗಳು ಇದ್ದರೆ ಎಚ್ಚೆತ್ತುಕೊಳ್ಳಬೇಕು. ಇನ್ನೂ ಮುಂದೆ ಮಧ್ಯವರ್ತಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ತಹಸೀಲ್ದಾರ್ ಅವರಿಗೆ ಮಧ್ಯವರ್ತಿಗಳ ಬಗ್ಗೆ ಗಮನ ಹರಿಸಿ ಕಡಿವಾಣ ಹಾಕುವಂತೆ ಸೂಚಿಸಿದರು. ಈ ವೇಳೆ ವಕೀಲ ಮುರಳಿ, ಕಾಳೇನಹಳ್ಳಿ ಆನಂದ್, ಗುಮ್ಮನಹಳ್ಳಿ ರಮೇಶ್ ಇತರರು ಇದ್ದರು.