

ವಿಜಯಪುರ: ಕಳೆದ ಹತ್ತು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ಗುಜರಾತ್ ಮಾದರಿ ಆಡಳಿತವನ್ನು ಇಡೀ ದೇಶದಲ್ಲಿ ಜಾರಿಗೆ ತರುವುದಲ್ಲದೇ ಅಟಲ್ ಬಿಹಾರಿ ವಾಜಪೇಯಿ ಅವರ ನದಿ ಜೋಡಣೆ ಕನಸು ಸಾಕಾರಗೊಳಿಸುವುದು ಸೇರಿದಂತೆ ಹತ್ತು ಹಲವು ಭರವಸೆಗಳನ್ನು ಮೋದಿ ಸರ್ಕಾರ ನೀಡಿತ್ತು. ಈವರೆಗೂ ಆ ಯಾವ ಭರವಸೆಗಳೂ ಈಡೇರಿಲ್ಲ. ಹೀಗಾಗಿ ಜನ ಬಿಜೆಪಿ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೇಲೆ ಅಗಾಧ ವಿಶ್ವಾಸ ಹೊಂದಿದ್ದಾರೆಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಅಂಥವರು ಮೋದಿ ಸರ್ಕಾರ ವಿದೇಶಗಳಲ್ಲಿ ಇರುವ ಕಪ್ಪು ಹಣ ವಾಪಸ್ ತಂದು ದೇಶದ ಸಾಲ ತುಂಬಿ ಉಳಿದ ಹಣವನ್ನು ಬಡವರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಇಡೀ ದೇಶದ ಜನ ಇದನ್ನು ನಂಬಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು, ಬೆಲೆ ಏರಿಕೆ ನಿಯಂತ್ರಿಸುವುದಾಗಿ ಹೇಳಿದ್ದರು, ಭಾರತದ ರೂಪಾಯಿ ಮೌಲ್ಯವನ್ನು ಅಮೇರಿಕಾ ಡಾಲರ್‌ಗೆ ಸಮ ತರುವ ಮಟ್ಟಿಗೆ ಆರ್ಥಿಕತೆ ಸುಧಾರಿಸುವುದಾಗಿಯೂ, ರೈತರ ಆದಾಯ ದ್ವಿಗುಣಗೊಳಿಸುವುದಾಗಿಯೂ ಹೇಳಿದ್ದರು. ಆದರೆ, ಆ ಯಾವ ಭವರಸೆಗಳನ್ನೂ ಬಿಜೆಪಿ ಈಡೇರಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ದೇಶದ ಜನ ಬಿಜೆಪಿ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಇದನ್ನು ಅರಿತ ಬಿಜೆಪಿ ಸಹ ಅಭಿವೃದ್ಧಿ ಬದಲು ಭಾವನಾತ್ಮಕವಾದ ವಿಷಯ ಉಲ್ಲೇಖಿಸಿ ಪ್ರಚಾರ ಮಾಡುವ ಮಟ್ಟಿಗೆ ಬಂದಿದೆ. ಆದರೆ ಜನ ಬಿಜೆಪಿಯ ಯಾವುದೇ ತಂತ್ರವನ್ನು ನಂಬುವ ಸ್ಥಿತಿಯಲ್ಲಿಲ್ಲ. ಬಿಜೆಪಿ ಆಡಳಿತ ವಿರೋಧಿ ಅಲೆ ಸೃಷ್ಠಿಯಾಗಿದೆ. ಹೀಗಾಗಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಕಳಸಾ ಬಂಡೂರಿ ಯೋಜನೆ ಕುರಿತು ಬಿಜೆಪಿ ಅಗಾಧ ಕನಸು ಬಿತ್ತಿತ್ತು. ಹೋರಾಟ ಮಾಡಿದ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆದರು. ಆಗ ಕೇಂದ್ರದಲ್ಲೂ ಬಿಜೆಪಿ, ಕರ್ನಾಟಕದಲ್ಲಿಯೂ ಬಿಜೆಪಿ ಮತ್ತು ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಇತ್ತು. ಆಗೆಲ್ಲ ಕಳಸಾ-ಬಂಡೂರಿ ಯೋಜನೆ ಕನಸು ಸಾಕಾರಗೊಳ್ಳಲಿದೆ ಎಂಬ ಅಗಾಧ ವಿಶ್ವಾಸ ಇತ್ತು. ಆದರೆ, ಆಗ ಬಿಜೆಪಿ ಆ ಕನಸು ಸಾಕಾರಗೊಳಿಸಲೇ ಇಲ್ಲ. ಬಿಜೆಪಿಯಲ್ಲಿದ್ದ ನಮಗೆ ಸಾಕಷ್ಟು ಮುಜುಗರ ಆಯಿತು. ಪರಿಣಾಮ ವಿಧಾನ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದರು. ಇದೀಗ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ಬಿಜೆಪಿ ಚುನಾವಣೆ ಬಂದಾಗ ಭಾವನಾತ್ಮಕ ವಿಚಾರ ಹುಟ್ಟು ಹಾಕಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ ಚುನಾವಣೆ ಎದುರಿಸುವುದು ನಾನು ಹತ್ತಿರದಿಂದ ಬಲ್ಲೆ. ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಕೇಳದೇ ಕೇವಲ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಂತಾಗಿರುವುದು ದುರ್ದೈವ ಸಂಗತಿ ಎಂದರು.
ಬರ ಪರಿಹಾರ ರಾಜ್ಯಕ್ಕೆ ಸಿಗಬೇಕಾದುದು ನ್ಯಾಯ, ಅದು ನಮ್ಮ ಹಕ್ಕು. ಅದನ್ನು ಪಡೆಯಲು ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತುವ ಸ್ಥಿತಿ ನಿರ್ಮಾಣ ಆಯಿತು. ಸುಪ್ರಿಂ ಕೋರ್ಟ್ ಸಹ ಪರಿಹಾರ ನೀಡಲು ಸೂಚಿಸಿತು. ನಮ್ಮದೇ ಹಣ ನಮಗೆ ನೀಡಲು ಮೀನ ಮೇಷ ಎಣಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವು ಸೂರ್ಯಚಂದ್ರರಷ್ಟೇ ಸತ್ಯ. 2023 ರ ರಾಜ್ಯ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೀಡಿದ ಐದು ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿದೆ. ಹೀಗಾಗಿ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಮೇಲೆ ಭರವಸೆ ಬಂದಿದೆ. ಬೆಲೆ ಏರಿಕೆ ಸಂದರ್ಭದಲ್ಲಿ ಈ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗಕ್ಕೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಈ ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿಯುವ ವಿಶ್ವಾಸ ಇದೆ ಎಂದರು.
ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುರೇಶ ಘೊಣಸಗಿ, ವೈಜನಾಥ ಕರ್ಪೂರಮಠ ಮತ್ತಿತರರಿದ್ದರು.