

ವಿಜಯಪುರ: ಪ್ರಾಮಾಣಿಕ ಕಾರ್ಯಕರ್ತನಾಗಿ ಬೇರು ಮಟ್ಟದಿಂದ ಪಕ್ಷ ಸಂಘಟಿಸಿದ್ದ ನನ್ನನ್ನು ಕಳೆದುಕೊಂಡ ಬಿಜೆಪಿಗೆ ಇದೀಗ ಪಶ್ಚಾತಾಪ ಕಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನಾನು ಬಿಜೆಪಿಗೆ ಹೋದಾಗ ಒಂದೇ ಒಂದು ಗ್ರಾಮ ಪಂಚಾಯಿತಿಯಲ್ಲಿಯೂ ಬಿಜೆಪಿ ಪರವಾದ ಸದಸ್ಯರು ಇರಲಿಲ್ಲ. ಆ ಸಂದರ್ಭ ಪ್ರತಿ ಗ್ರಾಮ ಮಟ್ಟಕ್ಕೆ ಹೋಗಿ ಪಕ್ಷದ ಪರ ಕಾರ್ಯಕರ್ತರ ಪಡೆ ಕಟ್ಟಿ ಬಿಜೆಪಿಯನ್ನು ಬಲವರ್ಧನೆಗೊಳಿಸಿದೆ. ಆದರೆ, ನನ್ನ ಸೇವೆ ಗುರುತಿಸುವ ಕೆಲಸ ಆಗಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠೀಯಲ್ಲಿ ಅವರು ಅವರು ಪ್ರತಿಕ್ರಿಯಿಸಿದರು.
ಬಿಜೆಪಿಯಲ್ಲಿದ್ದಾಗ ಲಕ್ಷ್ಮಣ ಸವದಿ ರಾಜನಂತಿದ್ದರು, ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು, ಆದರೆ ಕಾಂಗ್ರೆಸ್‌ಗೆ ಹೋಗಿ ಕೇವಲ ಶಾಸಕರಾಗಿಯೇ ಉಳಿದಿದ್ದು ಯಾವುದೇ ಸ್ಥಾನ ಮಾನ ನೀಡದೇ ಅವಮಾನಿಸಲಾಗುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ಕಾಂಗ್ರೆಸ್ ನನ್ನನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ. ವಿಮಾನದಲ್ಲಿ ಕರೆಯಿಸಿಕೊಂಡು ಪಕ್ಷದ ಬಿ ಫಾರ್ಮ್ ನೀಡಿದೆ. ಅಧಿಕಾರಕ್ಕಿಂತ ಗೌರವ ಮುಖ್ಯ ಎಂದರು.
ಬಿಜೆಪಿಯಲ್ಲಿ ನಾನು ಡಿಸಿಎಂ ಆಗಿದ್ದಾಗ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ಆ ಹುದ್ದೆಗೆ ಸಿಗಬೇಕಾದ ಗೌರವ ಸಿಗಲೇ ಇಲ್ಲ. ನಾನೇನು ಹಗರಣ ಮಾಡಿದ್ದೆನಾ? ನನ್ನ ಸಿಡಿಗಳೇನಾದರೂ ಬಿಡುಗಡೆಯಾಗಿದ್ದವಾ? ಯಾಕೆ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಗೊತ್ತಾಗಲಿಲ್ಲ. ಹೀಗಾಗಿ ಅಲ್ಲಿಂದ ಅನಿವಾರ್ಯವಾಗಿ ನಿರ್ಗಮಿಸಬೇಕಾಯಿತು. ನಾನು ನಿರ್ಗಮಿಸಿದ ನಂತರ ಬಿಜೆಪಿ ಅಧಿಕಾರವನ್ನೇ ಕಳೆದುಕೊಂಡಿತು. ಇದೀಗ ಆ ಪಶ್ಚಾತಾಪ ಬಿಜೆಪಿಗರನ್ನು ಕಾಡುತ್ತಿದೆ ಎಂದರು.
ಇನ್ನು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸವದಿ, ಪ್ರಜ್ವಲ್ ರೇವಣ್ಣ ಸಾಹಸಗಾರ ಎಂದು ಲೇವಡಿ ಮಾಡಿದರು.