

ಅಥಣಿ: ಇಲ್ಲಿನ ಕೃಷ್ಣ ಸಹಕರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ನೇತೃತ್ವದ ರೈತ ಸಹಕಾರಿ
ಪೆನಲ್ನ ಎಲ್ಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆಯಿರಿಸಿದ್ದಾರೆ. ಆದರೆ, ಹೈಕೋರ್ಟ್ ಆದೇಶದನ್ವಯ ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ಘೋಷಿಸುವುದು ಬಾಕಿ ಇದೆ. ಒಟ್ಟು 13 ಸ್ಥಾನಗಳ ಪೈಕಿ ಬ ವರ್ಗದ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಭಾನುವಾರ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರೈತರ ಸಹಕಾರಿ ಪೆನಲ್ನ ಎಲ್ಲ ಅಭ್ಯರ್ಥಿಗಳು ಮುನ್ನಡೆ ಸಾಧಿಸುವ ಮೂಲಕ ನಾಲ್ಕನೇ ಅವಧಿಗೆ ನಿಕಟಪೂರ್ವ ಅಧ್ಯಕ್ಷ ಪರಪ್ಪ ಸವದಿ ನೇತೃತ್ವದ ಆಡಳಿತ ಮಂಡಳಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಪ್ರತಿಸ್ಪರ್ಧಿಯಾಗಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ, ಶಹಜಹಾನ್ ಡೊಂಗರಗಾವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದ ಸ್ವಾಭಿಮಾನಿ ರೈತ ಪೆನಲ್ ಅಭ್ಯರ್ಥಿಗಳು ಹಿನ್ನಡೆ ಸಾಧಿಸಿದ್ದಾರೆ.
ವಿಜಯೋತ್ಸವ: ಅಥಣಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ಹಾಗೂ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಗಳು ಪರಸ್ಪರ ಗುಲಾಲ ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವಆಚರಿಸಿದರು.