ಗ್ರಾಮೀಣ ಬಡ ವರ್ಗದವರಿಗೆ ಉತ್ತಮ ಚಿಕಿತ್ಸೆ ನೀಡಲು ಶಾಸಕ ಕೋಟ್ಯಾನ್ ಸೂಚನೆ

MLA KOTIAN
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು. ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ನಪಂ ಮುಖ್ಯಾಧಿಕಾರಿ ಎನ್.ಎಂ ಮೇಸ್ತ ಮೊದಲಾದವರಿದ್ದರು.
Published on

ಮೂಲ್ಕಿ: ಗ್ರಾಮೀಣ ಬಡ ವರ್ಗದ ಜನರು ಚಿಕಿತ್ಸೆಗಾಗಿ ಬರುವ ಸಂದರ್ಭ ಸಮುದಾಯ ಆಸ್ಪತ್ರೆ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.

ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಬಳಿಕ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದುಕೊಂಡರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರಿಂದ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಬಂದಿದ್ದು, ಆಪರೇಟರ್ ಕೊರತೆ ಇದ್ದು, ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಆಸ್ಪತ್ರೆಯಲ್ಲಿ ಬೇಸಿಗೆ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಇದ್ದು, ಶಾಶ್ವತ ವ್ಯವಸ್ಥೆ ಅಗತ್ಯವಿದೆ ಎಂದರು.

ಎಲ್ಲವೂ ಪಾರದರ್ಶಕವಾಗಿರಬೇಕು

ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಸಿಬ್ಬಂದಿ ಉಡಾಫೆ ವರ್ತನೆ ತೋರಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಮುಂದೆ ಯಾವುದೇ ಕಾರಣಕ್ಕೂ ಪುನರಾವರ್ತನೆಯಾಗಬಾರದು. ಮೂರು ವರ್ಷಗಳಿಂದ ಆಸ್ಪತ್ರೆಗೆ ರವಾನೆಯಾಗುತ್ತಿರುವ ಔಷಧಗಳ ಲೆಕ್ಕಪತ್ರ ಹಾಗೂ ಔಷಧಗಳನ್ನು ಟೆಂಡರ್ ವಹಿಸಿಕೊಳ್ಳುವವರ ಬಗ್ಗೆ ಮಾಹಿತಿ ಅಗತ್ಯವಿದೆ. ಸಾರ್ವಜನಿಕರಿಂದ ದೂರು ಬಂದ ಕಾರಣ ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಉಮಾನಾಥ್ ಕೋಟ್ಯಾನ್ ಸೂಚನೆ ನೀಡಿದರು.

ಆಸ್ಪತ್ರೆಗೆ ಸ್ತ್ರೀರೋಗ, ಹೆರಿಗೆ ತಜ್ಞರು, ಕುಡಿಯುವ ನೀರಿನ ಬಾವಿ, ವಿದ್ಯುತ್ ಸಮಸ್ಯೆ, ಹೈಮಾಸ್ಟ್ ಲೈಟ್, ಆಸ್ಪತ್ರೆಯ ಜಾಗವನ್ನು ಗುರುತಿಸಿ ಅತಿಕ್ರಮಣವಾಗದಂತೆ ತಡೆಗೋಡೆ ನಿರ್ಮಾಣ ಬಗ್ಗೆ ಮನವಿ ಹಾಗೂ ಚರ್ಚೆ ನಡೆಯಿತು.

ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ನಪಂ ಮುಖ್ಯಾಧಿಕಾರಿ ಎನ್.ಎಂ ಮೇಸ್ತ, ಸದಸ್ಯರಾದ ಹರ್ಷರಾಜ ಶೆಟ್ಟಿ, ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾದ ನರಸಿಂಹ ಪೂಜಾರಿ, ಸತ್ಯೇಂದ್ರ ಶೆಣೈ, ಜಿಪಂ ಜೂನಿಯರ್ ಇಂಜಿನಿಯರ್ ಪ್ರಶಾಂತ್ ಆಳ್ವ, ಕಂದಾಯ ಅಧಿಕಾರಿ ಅಶೋಕ್, ಡಾ.ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net