

ಕುಂದಾಪುರ: ಕುಂದಾಪುರ ತಾಲೂಕು ಕಚೇರಿ ವ್ಯಾಪ್ತಿಯ ಕುಂದಾಪುರ ಹಾಗೂ ವಂಡ್ಸೆ ಹೋಬಳಿ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೇತೃತ್ವದಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ ಎರಡನೇ ಹಂತದ ಮುಷ್ಕರ ಕುಂದಾಪುರ ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಮುಂದುವರಿದಿದ್ದು, ಧರಣಿ ಸ್ಥಳಕ್ಕೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಮೂಲಸೌಕರ್ಯ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿದ್ದು, ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತಂದು ಕಂದಾಯ ಸಚಿವರೊಂದಿಗೆ ಚರ್ಚಿಸಿ ಶೀಘ್ರವಾಗಿ ಬೇಡಿಕೆ ಈಡೇರಿಸುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕುಂದಾಪುರ ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮಾ ಶೆಟ್ಟಿ ಕೆ., ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.