

ಮದ್ದೂರು: ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ತ್ವರಿತಗತಿಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಶಾಸಕರಾಗಿ ಆಯ್ಕೆಯಾದ ಬಳಿಕ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೊದಲ ಬಾರಿಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಅಧಿಕಾರಿಗಳು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ನಾನು ಜತೆಯಾಗಿ ಇರುತ್ತೇನೆ. ಲಂಚ ಕೇಳುವ ಹಾಗೂ ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಖಂಡಿತ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಅದಕ್ಕೆಲ್ಲ ನೀವೇ ಕಡಿವಾಣ ಹಾಕಿಕೊಳ್ಳಿ. ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ವಿವಿಧ ಕಾಮಗಾರಿಗಳನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಕಳೆಪ ಕಾಮಗಾರಿ ಬಗ್ಗೆ ದೂರುಗಳು ಕೇಳಿಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಮರಳು ಮಾಫಿಯಾ, ಜೂಜು ಅಡ್ಡೆಗಳು, ಕ್ರಿಕೆಟ್ ಬೆಟ್ಟಿಂಗ್ ದಂಧೆ, ಗಾಂಜಾ, ಅಕ್ರಮ ಮದ್ಯ ಮಾರಾಟ ಎಲ್ಲೆ ಮೀರಿದೆ. ಇದಕ್ಕೆಲ್ಲ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಪೊಲೀಸ್ ಅಂದರೆ ಭಯ ಅನ್ನೋದೇ ಹೋಗಿದೆ. ಪೊಲೀಸರು ತಪ್ಪು ಮಾಡಿದವರಿಗೆ ದಂಡ ಹಾಕೋದಲ್ಲ, ಠಾಣೆಯಲ್ಲಿ ಬೆದರಿಕೆ ಹಾಕಿ ಕಳಿಸೋದಲ್ಲ. ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರು ಪೊಲೀಸ್ ಎಂದರೆ ಭಯಪಡಬೇಕು ಎಂದರು.
ಟ್ರಸ್ಟ್ ವತಿಯಿಂದ ಶಾಲಾ ಶುಲ್ಕ: ಬುಧವಾರ ಸರ್ಕಾರಿ ಶಾಲೆಗಳು ಪ್ರಾರಂಭವಾಗುತ್ತಿವೆ. ಶಾಲಾ ಕೊಠಡಿಗಳನ್ನು ಮಾತ್ರ ಸ್ವಚ್ಛ ಮಾಡುವುದಲ್ಲ. ಶೌಚಗೃಹ, ಕುಡಿಯುವ ನೀರಿನ ಟ್ಯಾಂಕ್, ಅಡುಗೆ ಪದಾರ್ಥಗಳು ಹಾಗೂ ಶಾಲಾ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಯಾವುದಾದರೂ ಶಾಲೆಯಲ್ಲಿ ಶೌಚಗೃಹ ಇಲ್ಲದಿದ್ದರೆ ಪಟ್ಟಿ ಮಾಡಿ ತಿಳಿಸಿ. ಸಾಧ್ಯವಾದಷ್ಟು ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ವರ್ಷದ ಸರ್ಕಾರಿ ಶಾಲೆಯ ಮಕ್ಕಳ ಶಾಲಾ ಶುಲ್ಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗುತ್ತಿದ್ದು ಶುಲ್ಕ ಪಡೆಯದಂತೆ ಬಿಇಒ ಸಿ.ಎಚ್.ಕಾಳೀರಯ್ಯ ಅವರಿಗೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಬೇರೆಡೆಗೆ ಶಿಫಾರಸು ಮಾಡುವಂತಿಲ್ಲ: ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 100 ಬೆಡ್‌ಗಳ ಸಾಮರ್ಥ್ಯವಿದ್ದರೂ ಸಣ್ಣಪುಟ್ಟ ಚಿಕಿತ್ಸೆಗೂ ಮಂಡ್ಯ, ಮೈಸೂರು, ಬೆಂಗಳೂರಿಗೆ ರೋಗಿಗಳು ತೆರಳುವಂತಾಗಿದೆ. ಇನ್ನುಮುಂದೆ ವೈದ್ಯರು ವಿನಾಕಾರಣ ಬೇರೆಡೆಗೆ ಶಿಫಾರಸು ಮಾಡುವಂತಿಲ್ಲ. ಆದಷ್ಟು ಇಲ್ಲಿಯೇ ಚಿಕಿತ್ಸೆ ನೀಡಬೇಕು. ಯಾವ ಸೌಲಭ್ಯ ಇಲ್ಲವೋ ಅದನ್ನು ಪಟ್ಟಿ ಮಾಡಿ ತಿಳಿಸಿ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿಗೆ ಶಾಸಕ ಕದಲೂರು ಉದಯ್ ತಿಳಿಸಿದರು.
ಸೆಸ್ಕ್ ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳನ್ನು ಒಂದು ದಿನದಲ್ಲಿ ಅಳವಡಿಸಬೇಕೆಂಬ ಆದೇಶವಿದೆ. ಹಣ ಕೊಟ್ಟರೆ ಮಾತ್ರ ಬೇಗ ಕೆಲಸ ಆಗುತ್ತದೆ ಎಂಬ ದೂರುಗಳಿವೆ. ಮುಂದೆ ಇಂತಹ ಆರೋಪಗಳು ಬಾರದಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ತಾಪಂ ಆಡಳಿತಾಧಿಕಾರಿ ಧನರಾಜ್ ಬೋಳಾರೆ, ತಾಪಂ ಇಒ ಸಂದೀಪ್, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.