

ಹುಬ್ಬಳ್ಳಿ: ಈ ವರ್ಷ ಮಳೆ ಸರಿಯಾಗಿ ಆಗದೇ ಪರಿಸ್ಥಿತಿ ಬಿಗಡಾಯಿಸಿದೆ. ಬೆಳೆ ಸಮೀಕ್ಷೆ ಸಮರ್ಪಕವಾಗಿ ಮಾಡಿ ರೈತರಿಗೆ ಪರಿಹಾರ ಒದಗಿಸಬೇಕು, ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಸೂರು ಒದಗಿಸಬೇಕು, ಗ್ರಾಮೀಣ ರಸ್ತೆಗಳ ಸುಧಾರಣೆ ಸೇರಿದಂತೆ ಹಳ್ಳಿಗಳ ಉದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಇಲ್ಲಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ ಅವರು, ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು. ಜನರ ಸಮಸ್ಯೆಗಳ ಪರಿಹಾರ ವಿಷಯದಲ್ಲಿ ಅಸಡ್ಡೆ ತೋರಿದರೆ ನಿರ್ದಾಕ್ಷಿಣ್ಯವಾಗಿ ವರ್ಗಾವಣೆಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ರೈತರ ಜಮೀನು ಸರ್ವೇ ಮಾಡುವ ಸಂದರ್ಭದಲ್ಲಿ ಅನೇಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿದ್ದಾರೆ. ಜಮೀನಿನ ಅಳತೆಯಲ್ಲಿ ವ್ಯತ್ಯಾಸ ಮಾಡಿದ್ದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಕಾರಣವಾಗುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ತಹಸೀಲ್ದಾರ್ ಗೆ ಸೂಚಿಸಲಾಯಿತು.
ಎಲ್ ಆ್ಯಂಡ್ ಟಿ ಕಂಪನಿಯವರು ಕೆಲವೆಡೆ ಪೈಪ್ ಲೈನ್ ಹಾಕುವಾಗ ಅಂಕುಡೊಂಕಾಗಿದೆ. ಇದರಿಂದ ನೀರು ಪೂರೈಕೆ ಸರಾಗವಾಗುವುದಿಲ್ಲ. ಕಾಮಗಾರಿ ನಿರ್ವಹಿಸಿದ ಅಧಿಕಾರಿಗಳಿಗೆ ನೋಟಿಸ್ ಕೊಡಿ ಎಂದು ಶಾಸಕರು ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.
ಸನ್ಮಾನ: ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಅಣ್ಣಿಗೇರಿ ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ, ನವಲಗುಂದ ತಹಸೀಲ್ದಾರ್ ಸುಧೀರ ಸಾವುಕಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಳಿವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಫ್.ಡಿ. ತೋಟದ ಪ್ರಾಥಿರ್ಸಿದರು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಂಗಮೇಶ ಬಂಗಾರಿಮಠ ಸ್ವಾಗತಿಸಿದರು.