ಹಿಜಾಬ್ ನಿಷೇಧ ರದ್ದು ಸಿಎಂ ಹೇಳಿಕೆಗೆ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

allwyn_130820_kamath
Published on




ಮಂಗಳೂರು : ಹಿಜಾಬ್ ವಿವಾದ ಕುರಿತ ಪ್ರಕರಣ ಹೈಕೋರ್ಟ್‌ನಲ್ಲಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಇದು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣವಾಗಿದೆ. ಹಿಜಾಬ್ ಜಾರಿಗೆ ತಂದರೆ ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು ಧಾರಣೆಯನ್ನು ಬಿಜೆಪಿ ಬೆಂಬಲಿಸಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಜಾಬ್ ಧರಿಸಲು ಅವಕಾಶ ನೀಡುವ ಸಿಎಂ ಅವರ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುತ್ತೇನೆ ಎಂದು ಈ ಹಿಂದೆ ಹೇಳಿ ಸಮುದಾಯಗಳ ಮಧ್ಯೆ ಗೊಂದಲ ಉಂಟು ಮಾಡಿದ್ದರು. ಈಗ ಕೋರ್ಟ್‌ನಲ್ಲಿ ಇರುವ ಹಿಜಾಬ್ ವಿವಾದವನ್ನು ಮತ್ತೆ ಕೆಣಕಿದ್ದಾರೆ. ಸಿಎಂ ಅವರ ಈ ನಡವಳಿಕೆ ಖಂಡನೀಯ ಎಂದರು.
ಕಳೆದ ಬಾರಿ ಹಿಜಾಬ್ ವಿವಾದ ತಲೆದೋರಿದಾಗ ಶಾಸಕರಾಗಿದ್ದ ಯು.ಟಿ.ಖಾದರ್ ಅವರು ಶೈಕ್ಷಣಿಕ ಶಿಸ್ತು ಕಾಪಾಡುವುದು ಮುಖ್ಯ. ಹೈಕೋರ್ಟ್ ತೀರ್ಪನ್ನು ಪಾಲಿಸಲೇ ಬೇಕು ಎಂದು ಹಿಜಾಬ್ ರದ್ಧತಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು. ಈಗ ಹೈಕೋರ್ಟ್‌ತೀರ್ಪಿಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಹಿಜಾಬ್ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಈಗ ಸ್ಪೀಕರ್ ಆಗಿರುವ ಯು.ಟಿ.ಖಾದರ್ ಏನು ಹೇಳುತ್ತಾರೆ. ಹಾಗಾದರೆ ಖಾದರ್ ಹಾಗೂ ಸಿದ್ದರಾಮಯ್ಯ ನಿಲುವು ಬೇರೆ ಬೇರೆಯೇ ಎಂದು ಶಾಸಕರು ಪ್ರಶ್ನಿಸಿದರು.
ವಿದ್ಯಾರ್ಥಿನಿಯರು ಹೂ ಮುಡಿಯುವುದು, ಬಳೆ ತೊಡುವುದು, ತಿಲಕ ಧರಿಸುವುದನ್ನು ವಿರೋಧಿಸುವ ಶಿಕ್ಷಣ ಸಂಸ್ಥೆಗಳು ಹಿಜಾಬ್ ವಿಚಾರದಲ್ಲೂ ಕಟ್ಟುನಿಟ್ಟಿನ ನಿಲುವು ಪ್ರದರ್ಶಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
..........................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net