ಸ್ಪೀಕರ್ ಸುದ್ದಿಗೋಷ್ಠಿ ಯಾವುದೇ ಕಾರಣಕ್ಕೂ ಸಮ್ಮತವಲ್ಲ-ಶಾಸಕ ವೇದವ್ಯಾಸ ಕಾಮತ್

allwyn_130820_kamath
Published on



ಮಂಗಳೂರು : ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳದ ಉದ್ಘಾಟನೆಗೆ ಸಂಬಂಧಿಸಿ ವಿಧಾನಸಭೆಯ
ಸ್ಪೀಕರ್ ಯು.ಟಿ ಖಾದರ್ ಅವರು ಸುದ್ದಿಗೋಷ್ಠಿ ನಡೆದಿದ್ದು ಯಾವುದೇ ಕಾರಣಕ್ಕೂ ಸಮ್ಮತವಲ್ಲ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಸ್ಪೀಕರ್ ಅವರು ಸರ್ಕಾರದ ಈ ಕಾಮಗಾರಿಯ ಉದ್ಘಾಟನೆಯ ಕುರಿತು ಸುದ್ದಿಗೋಷ್ಠಿ ನಡೆಸಲು ಅವರು ಸರ್ಕಾರದ ಭಾಗವೇ? ಮುಖ್ಯಮಂತ್ರಿಗಳು ಉದ್ಘಾಟಿಸಲಿರುವ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಯಾವುದೇ ಜನಪ್ರತಿನಿಧಿಗಳು
ಸುದ್ದಿಗೋಷ್ಠಿ ನಡೆಸಿದ್ದರೆ ಅದನ್ನು ಒಪ್ಪಬಹುದು. ಆದರೆ ಸ್ಪೀಕರ್ ಅವರು ಸರ್ಕಾರದ ಭಾಗವಾಗಿ ಸುದ್ದಿಗೋಷ್ಠಿ ನಡೆಸುವುದು
ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಸ್ಪೀಕರ್ ಆದವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷಾತೀತವಾಗಿ ಸ್ಪೀಕರ್ ಸ್ಥಾನಕ್ಕೆ ಏರುತ್ತಾರೆ.
ಆದರೆ ಇಲ್ಲಿ ಮುಖ್ಯಮಂತ್ರಿಗಳು ಈಜುಕೊಳ ಉದ್ಘಾಟನೆಗೆ ಬರಲಿದ್ದಾರೆ ಎಂದು ಸ್ಪೀಕರ್ ಅವರೇ ಸುದ್ದಿಗೋಷ್ಠಿ ನಡೆಸುತ್ತಾರೆಂದರೆ ಅವರು ಕಾಂಗ್ರೆಸ್ ಪಕ್ಷದ ನಾಯಕರೋ? ಕಾಂಗ್ರೆಸ್ ವಕ್ತಾರರೋ? ಎಂಬುದನ್ನು ಸ್ಪಷ್ಟಪಡಿಸಬೇಕು.
ಸ್ಪೀಕರ್ ಹುದ್ದೆಯಲ್ಲಿದ್ದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಜನಸಾಮಾನ್ಯರು
ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ಯಾವ ಸ್ಪೀಕರ್ ಕೂಡ ಹೀಗೆ ಮಾಡಿದ ಉದಾಹರಣೆ ಇಲ್ಲ. ಇದು ಸ್ಪೀಕರ್ ಸ್ಥಾನಕ್ಕೆ ಶೋಭಿತ ತರುವಂತದ್ದಲ್ಲ. ಮುಂದಿನ ದಿನಗಳಲ್ಲಾದರೂ ಸ್ಪೀಕರ್ ಅವರು ಈ ಬಗ್ಗೆ ಅರಿತುಕೊಳ್ಳಬೇಕು ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net