ಮರಳು ಕೊರತೆಗೆ ಸರ್ಕಾರದ ಬೇಜವಾಬ್ದಾರಿ ಕಾರಣ - ಶಾಸಕ ವೇದವ್ಯಾಸ ಕಾಮತ್ ಆರೋಪ

allwyn_130820_kamath
Published on



ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಹಲವು ತಿಂಗಳು ಕಳೆದಿದೆ. ದುಬಾರಿ ದರದಿಂದಾಗಿ ಜನ ಸಾಮಾನ್ಯರಿಗೆ ಮರಳು ಖರೀದಿಸಲು ಆಗುತ್ತಿಲ್ಲ. ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷೃ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ನೇರ ಕಾರಣ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಶುಕ್ರವಾರ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಹೊಸದಾಗಿ ಗುರುತಿಸಿದ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕರಾವಳಿ ನಿಯಂತ್ರಣ ವಲಯ ಸಮಿತಿ ಪರಿಶೀಲನೆ ನಡೆಸಿದೆ. ಮರಳುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿಗೆ ವರದಿ ಕಳುಹಿಸಿಕೊಡಲಾಗಿದೆ. ಆದರೆ ಇದುವರೆಗೆ
ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗಿದೆ. ಮರಳು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಇದನ್ನೇ ನಂಬಿ ಬದುಕು ನಡೆಸುವ ಕಾರ್ಮಿಕ ಕುಟುಂಬಗಳು ಅತೀವ ಸಂಕಷ್ಟ ಎದುರಿಸಲಿವೆ ಎಂದು ಅವರು ಹೇಳಿದರು.
*ಕಾಂಗ್ರೆಸ್ ಆಪ್ತರಿಗೆ ಕದ್ರಿಯ ಮಳಿಗೆ ?
ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ 9 ಡಯಾಲಿಸಿಸ್ ಯಂತ್ರಗಳು ಇದುವರೆಗೆ ದುರಸ್ತಿಯಾಗಿಲ್ಲ. ಬೇಡಿಕೆ ಇರುವಷ್ಟು ಡಯಾಲಿಸಿಸ್ ಯಂತ್ರ ಇಲ್ಲದೇ ವೈದ್ಯರು ಸಹ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕು.
ಕದ್ರಿ ಪಾರ್ಕ್ ಹೊರಗಡೆ ಇರುವ ಮಳಿಗೆಗಳ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ್ದು ಅನುಮಾನ ಮೂಡಿಸಿದೆ. ಕಾಂಗ್ರೆಸ್‌ನವರು ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಆಪ್ತ ಬಳಗದ ವ್ಯಾಪಾರಿಗೆ ಆ ಮಳಿಗೆಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಈ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಅತಿ ಶೀಘ್ರದಲ್ಲಿ ಕಾನೂನು ಬದ್ಧವಾಗಿ ಇಲ್ಲಿನ ಮಳಿಗೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.
*ವಿದ್ಯಾರ್ಥಿ ವೇತನದಲ್ಲಿ ವಿಳಂಬ
ಪರಿಶಿಷ್ಟ ಜಾತಿ, ಪಂಗಡದ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಈ ಹಿಂದಿನಂತೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಸಹ ವಿದ್ಯಾರ್ಥಿ ವೇತನ ಪಾವತಿ ಆಗಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಇಲಾಖೆಯನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಅಲ್ಪಸಂಖ್ಯಾತರ ಸ್ವ ಉದ್ಯೋಗಕ್ಕಾಗಿ ನೀಡುವ ಶ್ರಮಶಕ್ತಿ ಲೋನ್ ಸ್ಕೀಮ್ ನಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವುದಕ್ಕೆ ಆ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1728 ಅರ್ಜಿಗಳು ಬಂದಿದ್ದು ಅದರಲ್ಲಿ ಕೇವಲ 8 ಜನರಿಗೆ ಮಾತ್ರ ಯೋಜನೆಯ ಫಲಾನುಭವಿಯಾಗಲು ಅವಕಾಶ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತರ ಹಿಂದುಳಿದವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಅವರು ಪ್ರಶ್ನಿಸಿದರು.
*ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ
ಕಾಂಗ್ರೆಸ ಸರ್ಕಾರ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸೂಕ್ತ ಸ್ಪಂದನೆಯೇ ದೊರಕುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯಾವುದೇ ಹೊಸ ಕಾಮಗಾರಿಗೆ ಅನುದಾನ ಸಿಗುತ್ತಿಲ್ಲ.ಮಂಗಳೂರಿನ ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಯಲ್ಲಿ ನಡೆದ ಬಯೋಮೆಟ್ರಿಕ್ ವಂಚನೆ ಮತ್ತು ನಗರ ಪಾಲಿಕೆಯ ಇ-ಖಾತಾ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಸಚಿವರ ಗಮನ ಸೆಳೆದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಶಾಸಕ ಕಾಮತ್ ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ವಿಜಯಕುಮಾರ್ ಶೆಟ್ಟಿ, ಅಜಯ್ ರಾಜ್, ರಮೇಶ್ ಹೆಗ್ಡೆ, ರೂಪಾ.ಡಿ ಬಂಗೇರ,ಸುರೇಂದ್ರ ಜೆ ,ಭಾಸ್ಕರಚಂದ್ರ ಶೆಟ್ಟಿ, ಕಿರಣ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net