ಬಡವರಿಗೆ ಸೂರು ಕಲ್ಪಿಸಲು ಶಾಸಕ ಕಾಮತ್ ಆಗ್ರಹ

allwyn_130820_kamath
Published on



ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿ 2017ರಿಂದ ಬಡಜನರು ಹಕ್ಕು ಪತ್ರಗಳನ್ನು ಹಿಡಿದು ಮನೆ ನಿರ್ಮಾಣಕ್ಕಾಗಿ ಕಾಯುತ್ತಿದ್ದಾರೆ. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದ್ದು ಪ್ರಸ್ತುತ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬೇಡಿಕೆ ಈಡೇರಿಸಿ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹಿಂದಿನ ಶಾಸಕರು 2017ರಲ್ಲೇ 930 ಬಡ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟು ತರಾತುರಿಯಲ್ಲಿ, ಕಾಮಗಾರಿಯ ಗುದ್ದಲಿ ಪೂಜೆ
ಮಾಡಿದ್ದರು. ಆದರೆ ಉದ್ದೇಶಿತ ಯೋಜನೆಯ ಪ್ರದೇಶವು ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ಸಹಜವಾಗಿ ಅರಣ್ಯ ಇಲಾಖೆ ತಡೆ ನೀಡಿದೆ. ಅಂದಿನಿಂದ ಬಡಕುಟುಂಬಗಳು ಹಕ್ಕು ಪತ್ರವನ್ನು ಹಿಡಿದುಕೊಂಡು ಅಲೆದಾಡುವ ಸ್ಥಿತಿ ಇದೆ. ನಾನು ಶಾಸಕನಾದ ಬಳಿಕ ಫಲಾನುಭವಿಗಳ ಪರವಾಗಿ ಸರ್ಕಾರ, ಅರಣ್ಯ ಇಲಾಖೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸತತ ಸಭೆ ನಡೆಸಿ ಅಂತಿಮವಾಗಿ 4 ವರ್ಷಗಳ ನಂತರ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ಇದ್ದ ಡೀಮ್ಡ್ ಫಾರೆಸ್ಟ್ ಸಹಿತ ಎಲ್ಲ ಅಡೆತಡೆಗಳನ್ನು ನಿವಾರಿಸಿದ್ದೇನೆ ಎಂದು ಶಾಸಕ ಕಾಮತ್ ವಿವರಿಸಿದರು.
ಈಗ ಜಿಲ್ಲಾಧಿಕಾರಿ ಅವರಿಂದ ಪ್ರಸ್ತಾವನೆಯನ್ನು ಸಹ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದ್ದು, ಈ ಬಗ್ಗೆ ಆದ್ಯತೆಯ ಮೇರೆಗೆ ಬಡವರ ಸೂರಿಗೆ ಕ್ರಮಕೈಗೊಳ್ಳಿ ಎಂದು ಅವರು ಒತ್ತಾಯಿಸಇದರು. ಇದಕ್ಕೆ ಉತ್ತರಿಸಿದ ಸಚಿವ ಜಮೀರ್ ಅಹ್ಮದ್ ಶಾಸಕರು ಹೇಳಿದ್ದೆಲ್ಲವೂ ಸರಿಯಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net