

ಮಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಅಮಾಯಕ ಜೀವಗಳು ಬಲಿಯಾಗಿವೆ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರೇ ವಿಜಯೋತ್ಸವ ಬೇಡ ಎಂದು ಅನುಮತಿ ನಿರಾಕರಿಸಿದ್ದರೂ, ರಾಜ್ಯ ಸರ್ಕಾರವೇ ಹಠಕ್ಕೆ ಬಿದ್ದು ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೇ ಆತುರವಾಗಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇ ಈ ಅನಾಹುತಕ್ಕೆ ಕಾರಣ. ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬ ಪರಿಜ್ಞಾನವೂ ಸರ್ಕಾರಕ್ಕೆ ಇಲ್ಲದಿದ್ದಿದ್ದು ಬಹು ದೊಡ್ಡ ಬೇಜವಾಬ್ದಾರಿತನವಾಗಿದೆ. ಈ ದುರಂತದ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.