

ಮಂಗಳೂರು : ಕುದ್ರೋಳಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೇಯರ್ ಮನೋಜ್ ಕುಮಾರ್ ಅವರು ದಿಢೀರ್ ದಾಳಿ ನಡೆಸಿದ್ದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ರಾಜ್ಯದ ಸಚಿವವಾರ ಮಂಕಾಳ ವೈದ್ಯರು ಅಕ್ರಮವಾಗಿ ಗೋವುಗಳನ್ನು ಕಡಿಯುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದು ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ ಇದ್ದರೆ ಮೊದಲು ಆ ಕೆಲಸ ಇಲ್ಲಿ ಮಾಡಿ ತೋರಿಸಲಿ. ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಒಂದೂ ಕಸಾಯಿಖಾನೆ ಇಲ್ಲ. ಆದರೆ ದಿನ ನಿತ್ಯ ಗೋಮಾಂಸ ರವಾನೆಯಾಗುತ್ತಿದೆ. ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುವ
ಧೈರ್ಯವನ್ನು ಪೊಲೀಸ್ ಇಲಾಖೆ ತೋರಿಸುತ್ತಿಲ್ಲ. ಇಲ್ಲಿ ರಾಜ್ಯ ಸರ್ಕಾರವೇ ಅಕ್ರಮಕ್ಕೆ ಬೆಂಬಲ ನೀಡಿ ಪೊಲೀಸರ ಕೈಕಟ್ಟಿ ಹಾಕಿರುವುದು ಸ್ಪಷ್ಟವಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕೇವಲ ಮಹಾನಗರ ಪಾಲಿಕೆ ಜವಾಬ್ದಾರಿಯಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೂ ಜವಾಬ್ದಾರಿಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ಗೋವಧಾಕಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನುಗಳನ್ನು ತಂದ ಪರಿಣಾಮ ಅಕ್ರಮಗಳು ನಿಯಂತ್ರಣಕ್ಕೆ ಬಂದಿತ್ತು. ಹಾಗಾಗಿ ಮತ್ತೆ ಅಂತಹ ಕಾನೂನುಗಳು ಜಾರಿಗೆ ಬರಬೇಕು. ಮುಂದೇನಾದರೂ ಅನಾಹುತಗಳು ಸಂಭವಿಸಿದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಶಾಸಕ ಕಾಮತ್ ಎಚ್ಚರಿಕೆ ನೀಡಿದ್ದಾರೆ.