ಆಟೋ ರಿಕ್ಷಾಗಳ ಗೊಂದಲ ಬಗೆಹರಿಸಲು ಶಾಸಕ ಕಾಮತ್ ಮನವಿ

allwyn_130820_kamath
Published on


ಮಂಗಳೂರು : ಮಂಗಳೂರು ನಗರದಲ್ಲಿ ಪರ್ಮಿಟ್ ಹೊಂದಿರುವ ಹಾಗೂ ಬ್ಯಾಟರಿ ಚಾಲಿತ ರಿಕ್ಷಾಗಳ ನಡುವೆ ಉಂಟಾಗಿರುವ ಗೊಂದಲಗಳಿಗೆ ತಾರ್ಕಿಕ ಅಂತ್ಯ ನೀಡುವ ಉದ್ದೇಶದಿಂದ ಸ್ವತಃ ರಿಕ್ಷಾ ಚಾಲಕ-ಮಾಲಕ ಅಸೋಸಿಯೇಷನ್‌ಗಳೇ ತಮಿಳುನಾಡು ಮಾದರಿಯ ಪರಿಹಾರ ಸೂತ್ರವೊಂದನ್ನು ಸರ್ಕಾರದ ಮುಂದಿಟ್ಟಿವೆ. ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
ಈ ಹಿಂದೆ ಬ್ಯಾಟರಿ ಚಾಲಿತ ರಿಕ್ಷಾಗಳು ಮಂಗಳೂರು ನಗರದೊಳಗೆ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪರಿಷ್ಕೃತ ಆದೇಶವನ್ನು ಹೊರಡಿಸುವಂತೆ ಈಗಿನ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದನ್ವಯ ವರು ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ನಗರದೊಳಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿದ್ದಾರೆ. ಇದರಲ್ಲಿ ಜನಪ್ರತಿನಿಧಿಗಳ ಪಾತ್ರವಿಲ್ಲ. ರಾಜ್ಯ ಹೈಕೋರ್ಟಿನ ಆದೇಶದಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ತಮಿಳುನಾಡಿನಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿದ್ದಾಗ ಅಲ್ಲಿನ ಸರ್ಕಾರ ಗೊಂದಲವನ್ನು ಬಗೆಹರಿಸಲು ಸೂಕ್ತ ನಿರ್ಧಾರವನ್ನು ಕೈಗೊಂಡಿತ್ತು. ಇದರಿಂದ ಅಲ್ಲಿನ ಪೆಟ್ರೋಲ್, ಗ್ಯಾಸ್,ಬ್ಯಾಟರಿ ಸಹಿತ ಯಾವುದೇ ರೀತಿಯ ರಿಕ್ಷಾಗಳಿಗೆ ತೊಂದರೆ ಆಗಿಲ್ಲ. ತಮಿಳುನಾಡು ಮಾದರಿಯನ್ನು ಅನುಸರಿಸಲು ಮತ್ತೆ ವಿಳಂಬ ನೀತಿ ಅನುಸರಿಸದೇ ತಕ್ಷಣದಲ್ಲಿಯೇ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸಮಸ್ಯೆ ಉಲ್ಬಣಿಸಿದರೆ ಅದರ ಸಂಪೂರ್ಣ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರೇ ಹೊರಬೇಕಾಗುತ್ತದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net