

ಮಂಗಳೂರು : ಮಂಗಳೂರು ವಿ.ವಿ.ಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಸಿಬ್ಬಂದಿ ವೇತನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ವಿ.ವಿ.ಯ ಆಡಳಿತ ಸಂಧ್ಯಾ ಕಾಲೇಜು ಸಹಿತ ಕೆಲವು ವಿಭಾಗಗಳನ್ನು ಮುಚ್ಚಲು ಮುಂದಾಗಿದ್ದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಇದು ಕೈಗನ್ನಡಿಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರು ವಿವಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಅತಿಥಿ ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಎಂಬ ಹೆಸರು ಪಡೆದುಕೊಂಡಿದ್ದ ಮಂಗಳೂರು ವಿವಿ
ಭ್ರಷ್ಟಾಚಾರದಿಂದಾಗಿ ಅಕ್ಷರಶಃ ತನ್ನ ಘನತೆ ಹಾಳು ಮಾಡಿಕೊಂಡಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾದ ನೆಪದಲ್ಲಿ ಪದವಿ ಹಾಗೂ ಸ್ನಾತಕೋತ್ತರದ ಹಲವು ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಸಂಧ್ಯಾ ಕಾಲೇಜಿನ ಪ್ರವೇಶಾತಿ ನಿಲ್ಲಿಸಿದ್ದು ಇದಕ್ಕೆ ಸಾಕ್ಷಿ. ಹಗಲಿನಲ್ಲಿ ಕೆಲಸ ನಿರ್ವಹಿಸಿ ಸಾಯಂಕಾಲ ಶಿಕ್ಷಣ ಪಡೆಯುತ್ತಿದ್ದ ಬಡ ವಿದ್ಯಾರ್ಥಿಗಳ ಹೊಟ್ಟೆಗೆ ಬಡಿದಂತಾಗಿದೆ. ನಗರದ ಹೃದಯ ಭಾಗದಲ್ಲಿರುವ ಏಕೈಕ ಸರ್ಕಾರಿ ಕಾಲೇಜನ್ನೇ ಮುಚ್ಚುವ ಹುನ್ನಾರದಂತೆ ಕಾಣುತ್ತಿದೆ. ಸಂಧ್ಯಾ ಕಾಲೇಜಿನಲ್ಲಿ ಪದವಿ ಪ್ರವೇಶ ನಿಲ್ಲಿಸಿದ್ದರಿಂದ ಹಲವಾರು ಮಂದಿ ಉಪನ್ಯಾಸಕರು, ಸಿಬ್ಬಂದಿಯ ಉದ್ಯೋಗಕ್ಕೂ ಕತ್ತರಿ ಹಾಕಿದಂತಾಗಿದೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವೇ ಮಂಗಳೂರು ವಿವಿಯನ್ನು ಅಧೋಗತಿಗೆ ತಳ್ಳಿದ್ದು ಸಾವಿರಾರು ಬಡವರ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
........................