ಗಣೇಶೋತ್ಸವ ವಿರೋಧಿಸುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿರುವುದು ದುರಂತ - ಶಾಸಕ ವೇದವ್ಯಾಸ ಕಾಮತ್

allwyn_130820_kamath
Published on





ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಾ ಬಂದಿದೆ. ಈ ವರ್ಷ ಇದ್ದಕ್ಕಿದ್ದ ಹಾಗೆ ವಿರೋಧ ಉಂಟಾಗಿದ್ದು ಏಕೆ ಮತ್ತು ಹೇಗೆ ಎನ್ನುವುದಕ್ಕೆ ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ವಿಶ್ವವಿದ್ಯಾನಿಲಯ ವಿದ್ಯಾದೇಗುಲ, ಅಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಬಾರದೆಂದು ಹೇಳುವ ಕಾಂಗ್ರೆಸ್ ನಾಯಕರು ಕಳೆದ 40 ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ಗಣೇಶ ಹಬ್ಬವನ್ನು ಆಚರಿಸಿದ್ದು ತಪ್ಪು ಎಂದು ಹೇಳುತ್ತಾರಾ? ವಿಶ್ವ ವಿದ್ಯಾನಿಲಯದಲ್ಲಿ ಹಣ ಇಲ್ಲ, ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂದು ನೂರೆಂಟು ಕಾರಣ ಹೇಳುವವರು, ದೇಶದ ವಿರುದ್ಧ ದ್ವೇಷಕಾರುವ ಡಾ.ಶಂಸುಲ್ ರಂತಹ ವ್ಯಕ್ತಿಯ ಉಪನ್ಯಾಸ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾರೆ. ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಹಿಂದೂ ದೇವರ ಹಬ್ಬ ಆಚರಣೆಗಳನ್ನು ವಿರೋಧಿಸುವ ಮಟ್ಟಕ್ಕೆ ಇಳಿದಿರುವುದು ದುರಂತ ಎಂದು ಅವರು ಹೇಳಿದ್ದಾರೆ.
ಗಣೇಶೋತ್ಸವಕ್ಕೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದು ಪ್ರಭಾರ ಕುಲಪತಿ ಹೇಳಿದಾಗ ಕಾಂಗ್ರೆಸ್ ನಾಯಕರು ಅವಕಾಶ ನೀಡುವಂತೆ ಒತ್ತಾಯ ಮಾಡಬೇಕಿತ್ತು. ಕಾಂಗ್ರೆಸ್ ವಿತಂಡವಾದ ಮಾಡುವ ಬದಲು
ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಹಬ್ಬ ಆಚರಿಸುವುದಕ್ಕೆ ಸರ್ಕಾರದಿಂದಲೇ ಪ್ರಭಾರ ಕುಲಪತಿಗೆ ಆದೇಶ ಕೊಡಿಸಿ ಗಣಪತಿಯ ಮೇಲಿರುವ ಭಕ್ತಿಯನ್ನು ಪ್ರದರ್ಶಿಸಲಿ.ಗಣಪತಿ ಹಬ್ಬವನ್ನು ಪ್ರತಿ ವರ್ಷದಂತೆ ನಡೆಸಬೇಕೋ? ಅಥವಾ ಈ ಬಾರಿಯಿಂದ ನಿಲ್ಲಿಸಬೇಕೋ? ಎಂಬುದನ್ನು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಲಿ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net