

ವಿಜಯವಾಣಿ ಸುದ್ದಿಜಾಲ ರಾಯಚೂರು
ದೇವದುರ್ಗ ತಾಲೂಕಿನ ಗಬ್ಬೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮನ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಿತ್ತು. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸದಿರುವುದು ಕಾರ್ಯಕರ್ತರಲ್ಲಿ ನಿರಾಸೆ ಮೂಡುವಂತೆ ಮಾಡಿತ್ತು.
ಕಾರ್ಯಕ್ರಮ ಮಧ್ಯಾಹ್ನ ನಿಗದಿಯಾಗಿದ್ದರೂ ಜನರಿಗೆ ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ತಿಳಿಸಿದ್ದರಿಂದ ಬೆಳಗ್ಗೆಯಿಂದಲೇ ಜನರು ವೇದಿಕೆಯತ್ತ ಆಗಮಿಸಲಾರಂಭಿಸಿದ್ದರು. ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಆರಂಭವಾಗಿ, 45 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಅಮಿತ್ ಷಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಹೇಳುವುದರ ಜತೆಗೆ ಕಾಂಗ್ರೆಸ್ ಮತ್ತು ರಾಹುಲ್‌ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಎಸ್‌ವೈ ಮತ್ತು ಬಸವರಾಜ ಬೊಮ್ಮಾಯಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಆರಾಧ್ಯ ದೈವಗಳನ್ನು ನೆನೆಯುವುದರೊಂದಿಗೆ ಐತಿಹಾಸಿಕ ಶ್ರೀಮಂತಿಕೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಭದ್ರತಾ ದೃಷ್ಟಿಯಿಂದ ವೇದಿಕೆ ಮೇಲೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿರಲಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟನೆ ನೆರವೇರಿದ ನಂತರ ವೇದಿಕೆಗೆ ಆಗಮಿಸಿದರು. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಾಸಕ ಕೆ.ಶಿವನಗೌಡ ನಾಯಕ 4,283 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಅಮಿತ್ ಷಾ ಮೂಲಕ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿದ್ದು ಎದ್ದು ಕಂಡುಬರುತ್ತಿತ್ತು.
ಮರೆಯಾದ ಮೆರುಗು
ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಿದ್ದರೂ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಗೈರಾಗಿದ್ದು, ಮೆರುಗು ಮರೆಯಾದಂತೆ ಕಂಡು ಬರುತ್ತಿತ್ತು. ಜಿಲ್ಲೆಯಲ್ಲಿ ಬಿಎಸ್‌ವೈ ಅಭಿಮಾನಿ ಬಳಗ ದೊಡ್ಡದಿದ್ದು, ಯಡಿಯೂರಪ್ಪ ಆಗಮಿಸಿದ್ದರೆ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಿದಂತಾಗುತ್ತಿತ್ತು ಎನ್ನುವ ಮಾತುಗಳು ಕೇಳಿ ಬಂದವು. ಬೀದರ್ ಜಿಲ್ಲೆಯಲ್ಲಿ ಅಮಿತ್ ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಎಸ್‌ವೈ ಗಬ್ಬೂರಿನ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಹಾವೇರಿ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹೆಲಿಕಾಪ್ಟರ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಬರಲಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಕೂಡ ಬರಲಿಲ್ಲ.
ನೀರಿಗಾಗಿ ಪರದಾಟ
ಕಾರ್ಯಕ್ರಮಕ್ಕೆ ಆಗಮಿಸುವವರನ್ನು ಮುಖ್ಯದ್ವಾರದ ಬಳಿಯೇ ತಪಾಸಣೆ ನಡೆಸಿ ಒಳಗೆ ಬಿಡಲಾಯಿತು. ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಕೂಡ ಅವಕಾಶ ನೀಡಲಿಲ್ಲ. ಕಾರ್ಯಕ್ರಮ ಆರಂಭಕ್ಕೂ ಎರಡರಿಂದ ಮೂರು ಗಂಟೆ ಮುಂಚಿತವಾಗಿ ಜನರು, ಕಾರ್ಯಕರ್ತರು ವೇದಿಕೆ ಮುಂಭಾಗದಲ್ಲಿ ಕುಳಿತುಕೊಂಡಿದ್ದರು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಬಹಳಷ್ಟು ಜನರು ಸಮಸ್ಯೆ ಎದುರಿಸುವಂತಾಗಿತ್ತು. ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಜನರು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸುತ್ತಿರುವುದು ಕಂಡು ಬಂತು.
ಕೇಸರಿಮಯವಾಗಿದ್ದ ಕಲ್ಮಲಾ- ದೇವದುರ್ಗ ರಸ್ತೆ
ದೇವದುರ್ಗ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜನರನ್ನು ಕರೆತರಲಾಗಿತ್ತು. ಕಲ್ಮಲಾ- ದೇವದುರ್ಗ ರಸ್ತೆ ಸಂಪೂರ್ಣ ಬಿಜೆಪಿಮಯವಾದಂತೆ ಕಂಡು ಬರುತ್ತಿತ್ತು. ಗ್ರಾಮದ ಹೊರವಲಯದಲ್ಲಿ ಸುಮಾರು 20 ಎಕರೆ ಜಾಗದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಸುಮಾರು 1.10 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದ್ದು, ಎಲ್ಲವೂ ಭರ್ತಿಯಾಗಿದ್ದವು. ಗೃಹಸಚಿವ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಶಾಸಕ ಕೆ.ಶಿವನಗೌಡ ನಾಯಕ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಮಧ್ಯಾಹ್ನ 1.57ಕ್ಕೆ ಜನರತ್ತ ಕೈ ಬೀಸುತ್ತಾ ವೇದಿಕೆಗೆ ಆಗಮಿಸಿದ ಅಮಿತ್ ಷಾ ಕಾರ್ಯಕ್ರಮ ಉದ್ಘಾಟಿಸುವ ಜತೆಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಸಂಸದ ರಾಜಾ ಅಮರೇಶ್ವರ ನಾಯಕ ತಲಾ ಐದು ನಿಮಿಷ ಮಾತನಾಡಿದರೆ, ಅಮಿತ್ ಷಾ 14 ನಿಮಿಷ ಮಾತನಾಡಿದರು.
ಎಲ್ಲೆಲ್ಲೂ ಖಾಕಿ ಕಣ್ಗಾವಲು
ವೇದಿಕೆ ಕಾರ್ಯಕ್ರಮ, ಊಟ, ಕುಡಿವ ನೀರು, ಪಾರ್ಕಿಂಗ್ ಸೇರಿ ಇತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು. ವೇದಿಕೆ ಮುಂಭಾಗದಲ್ಲಿ ಸಾವಿರಾರು ಪೊಲೀಸರು ಕಾವಲಿಗೆ ನಿಂತಿದ್ದರೆ, ಮುಖ್ಯರಸ್ತೆ, ಊಟ, ಪಾರ್ಕಿಂಗ್ ಜಾಗದಲ್ಲಿ ಆರಕ್ಷಕರು ಕಾವಲು ಕಾಯ್ದರು. ಸಮಾವೇಶ ಸ್ಥಳದ ಒಂದೂವರೆ ಕಿಮೀ ದೂರದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಲ್ಮಲಾ- ದೇವದುರ್ಗ ರಾಜ್ಯ ಹೆದ್ದಾರಿಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬಸ್ ಹಾಗೂ ಇತರ ವಾಹನಗಳ ಸಂಚಾರ ರದ್ದುಗೊಳಿಸಲಾಗಿತ್ತು.
ಊಟಕ್ಕಾಗಿ ಹಲವು ಕೌಂಟರ್
ಜನರಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ರಿಂದಲೇ ಊಟ ನೀಡಲು ಆರಂಭಿಸಲಾಯಿತು. ಲಾಡು, ಬದನೆಕಾಯಿ ಪಲ್ಯ, ಅನ್ನ, ಸಾಂಬರ್, ಖಾರಬೂಂದಿ ಜತೆಗೆ ಒಂದು ಅರ್ಧ ಲೀಟರ್ ನೀರಿನ ಬಾಟಲ್ ನೀಡಲಾಯಿತು. 20 ಎಕರೆ ಜಾಗದಲ್ಲಿ ಊಟದ ನಾಲ್ಕು ಕೌಂಟರ್ ತೆರೆಯಲಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಸಿಲಿನ ತಾಪ ತಾಳಲಾರದೆ ಹಲವರು ಹತ್ತಿರದಲ್ಲೇ ಇದ್ದ ನಾರಾಯಣಪುರ ಬಲದಂಡೆ ಉಪಕಾಲುವೆಯಲ್ಲಿ ಸ್ನಾನ ಮಾಡಿದರು.
ಸಂಚಾರ ದಟ್ಟಣೆಯಿಂದ ಸಮಸ್ಯೆ
ಕಾರ್ಯಕ್ರಮ ಆರಂಭಕ್ಕೆ ಮುನ್ನ ಅಚ್ಚುಕಟ್ಟಾಗಿದ್ದ ಸಂಚಾರ ವ್ಯವಸ್ಥೆ, ಸಮಾರಂಭ ಮುಗಿದ ನಂತರ ಅಸ್ತವ್ಯಸ್ತಗೊಂಡಿತು. ಎಲ್ಲ ಕಡೆಯಿಂದ ರಾಜ್ಯ ಹೆದ್ದಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಸುಮಾರು ಒಂದೂವರೆ ಗಂಟೆ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಖಾಸಗಿ ವಾಹನಗಳು ಹಾಗೂ ಬೈಕ್‌ಗಳ ಅಡ್ಡಾದಿಡ್ಡಿ ಓಡಾಟದಿಂದ ಸಂಚಾರ ಸಂಕಷ್ಟ ಎದುರಾಗಿತ್ತು. ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪೊಲೀಸರು ಅಸಹಾಯಕರಾಗಿ ನಿಂತಿರುವುದು ಕಂಡುಬಂತು. ಸಮಾವೇಶಕ್ಕೆ ನಿರೀಕ್ಷೆಯಂತೆ ಲಕ್ಷಾಂತರ ಜನರು ಬಂದಿದ್ದರಿಂದ ಗಬ್ಬೂರು ನಾಲ್ಕು ಗಂಟೆಗೂ ಹೆಚ್ಚುಕಾಲ ಜನರಿಂದ ತುಂಬಿತುಳುಕುತ್ತಿತ್ತು. ಪಟ್ಟಣದ ಅಂಗಡಿ ಮುಂಗಟ್ಟು, ರಸ್ತೆಗಳ ಇಕ್ಕೆಲಗಳಲ್ಲಿ ಜನರು ತುಂಬಿದ್ದರು. ಹೋಟೆಲ್, ಅಂಗಡಿ, ತಳ್ಳುವ ಬಂಡಿ, ಪಾನ್‌ಶಾಪ್, ತಂಪುಪಾನೀಯ ಸೇರಿ ವಿವಿಧ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.