ಸರ್ಕಾರಿ ಶಾಲೆಗಳ ಉಳಿವಿಗೆ ಪಾಲಕರ ಸಹಕಾರ ಅತ್ಯಗತ್ಯ

29myk2a
Published on

ಮಾಯಕೊಂಡ: ಸರ್ಕಾರಿ ಶಾಲೆಗಳ ಉಳಿವಿಗೆ ಹಾಗೂ ಅದರ ಸಮಗ್ರ ಅಭಿವೃದ್ಧಿಗೆ ಪಾಲಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಕೆ ಎಸ್ ಬಸವಂತಪ್ಪ ತಿಳಿಸಿದರು.

ಆನಗೋಡು ಹೋಬಳಿಯ ಕೆರೆಯಾಗಳಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ರೈತ, ಕೂಲಿ ಕಾರ್ವಿುಕರ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿ. ಶಾಲೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಾನು ಸಿದ್ಧ ಎಂದು ತಿಳಿಸಿದರು.

ಉತ್ತಮ ಪದವೀಧರ ಶಿಕ್ಷಕರಿದ್ದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಾರೆ. ಯಾವುದೇ ಖಾಸಗಿ ಶಿಕ್ಷಣಕ್ಕಿಂತ ಕಡಿಮೆ ಇಲ್ಲದ ಶಿಕ್ಷಣ ನಮ್ಮ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತದೆ. ಸರ್ಕಾರದಿಂದ ಹಲವಾರು ಉಚಿತ ಸವಲತ್ತುಗಳನ್ನು ನೀಡುವುದರೊಂದಿಗೆ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಶಾಲೆಯಲ್ಲಿ ಶಿಕ್ಷಕರ ಕೊರತೆ, ಕೊಠಡಿಗಳ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಸದ್ಯದಲ್ಲೇ ಇವುಗಳ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಖ್ಯಶಿಕ್ಷಕಿ ಶೋಭಾ, ಎಸ್​ಡಿಎಂಸಿ ಅಧ್ಯಕ್ಷ ಕರಿಯಪ್ಪ, ಮುಖಂಡರಾದ ಆರ್. ಬಸವರಾಜಪ್ಪ, ಷಣ್ಮುಖಪ್ಪ, ನಾಗಣ್ಣ, ಹೊನ್ನಪ್ಪ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net