ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿಕೆ

1
Published on

ಶ್ರೀನಿವಾಸಪುರ: ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳ ಮೂಲಕ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವುದು ನನ್ನ ಧ್ಯೇಯ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ಪುರಸಭೆಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ. ಗ್ರಾಮೀಣ ಭಾಗಕ್ಕೆ ಐದು ಸಾವಿರ ಮನೆಗಳು ಸರ್ಕಾರದಿಂದ ಬಿಡುಗಡೆಯಾಗಿದ್ದು, ಪಿಡಿಒ ಅಧಿಕಾರಿಗಳು ತಕ್ಷಣ ವಸತಿ ರಹಿತರನ್ನು ಪತ್ತೆ ಹಚ್ಚಿ ಶೀಘ್ರವಾಗಿ ಪಟ್ಟಿ ಸಿದ್ಧಪಡಿಸಬೇಕು ಎಂದರು.
ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನಾನೇ ಖುದ್ದು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿ ತನಿಖೆ ಮಾಡಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಿಎ ಹಾಗೂ ಆರ್‌ಐಗಳು ಸಾಗುವಳಿ ಚೀಟಿ ವಿತರಿಸಲು ಸ್ಥಳ ಪರಿಶೀಲನೆ ನಡೆಸಿ ಆ. 7ರ ಒಳಗೆ ವರದಿ ನೀಡಬೇಕು. ಅವಶ್ಯವಿರುವ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಒದಗಿಸಿ, ಒತ್ತುವರಿ ತೆರವುಗೊಳಿಸಿ ಗ್ರಾಪಂ ಹಸ್ತಾತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪೋಸ್ಟ್ ಆಫೀಸ್ ರಸ್ತೆಯಿಂದ ಚಿಂತಾಮಣಿ ಸರ್ಕಲ್‌ವರೆಗಿನ ರಸ್ತೆ ಕಾಮಗಾರಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಪುರಸಭೆ ಸದಸ್ಯ ಮುನಿರಾಜು, ಮುಖಂಡರಾದ ಜಾಮಚಟ್ಲು ಶ್ರೀನಿವಾಸರೆಡ್ಡಿ, ಗಂಗಾಧರ್, ಅಕ್ಬರ್‌ಷರೀಪ್, ಅಪ್ಪೂರ್ ವೆಂಕಟೇಶ್, ಸಯ್ಯದ್ ಖಾದರ್, ಮಂಜುನಾಥ್ ಇತರರು ಇದ್ದರು.


ಶ್ರೀನಿವಾಸಪುರ ಪುರಸಭೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬೈರಪ್ಪಲ್ಲಿ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net