ತಿಲಕ್‌ನಗರದಲ್ಲಿ ಶಾಸಕ ಕೆ.ಹರೀಶ್‌ಗೌಡ ಪಾದಯಾತ್ರೆ: ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಅಧಿಕಾರಿಗಳಿಗೆ ಖಡಕ್ ಸೂಚನೆ

1
Published on

ಸರ್ವ ಜನಾಂಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.

ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.25ರ ತಿಲಕ್‌ನಗರ ವ್ಯಾಪ್ತಿಯಲ್ಲಿ ಸೋಮವಾರ ಪಾಲಿಕೆ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ನಿವಾಸಿಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಬಡವರು, ದೀನ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ರಸ್ತೆ, ಚರಂಡಿ, ಕುಡಿಯುವ ನೀರು ಪೂರೈಕೆ, ಯುಜಿಡಿ ನಿರ್ಮಾಣ, ಪಾರ್ಕ್‌ಗಳ ಅಭಿವೃದ್ಧಿ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.

ಗಮನ ಸೆಳೆದ ಕುಡಿಯುವ ನೀರಿನ ಸಮಸ್ಯೆ: ಪಾದಯಾತ್ರೆ ವೇಳೆ ಕಿರು ಮೋರಿಗಳಿಗೆ ಸ್ಲಾೃಬ್ ಹಾಕಿಸುವಂತೆ ಶಾಸಕರಿಗೆ ಸ್ಥಳೀಯರು ಮನವಿ ಮಾಡಿದರು. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿವಾಸಿಗಳು ಶಾಸಕರ ಗಮನಕ್ಕೆ ತಂದರು. ನಿಗದಿತ ಸಮಯದಲ್ಲಿ ನೀರು ಸರಬರಾಜು ಆಗದಿರುವುದರ ಬಗ್ಗೆ ದೂರು ಸಲ್ಲಿಸಿದರು. ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಶ್ವಿನ್ ಅವರಿಗೆ ಶಾಸಕ ಹರೀಶ್ ಗೌಡ ಸೂಚಿಸಿದರು.

ವೀರನಗೆರೆ, ಸಿ.ವಿ.ರಸ್ತೆ, ಪುಲಿಕೇಶಿ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಮೊದಲು ನೀರು ಬಿಡುವುದರಿಂದ ಈ ಪ್ರದೇಶಕ್ಕೆ ಗ್ರಾೃವಿಟಿ ಸಾಲುತ್ತಿಲ್ಲ. ಹೊಸದಾಗಿ ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್‌ನಿಂದ ಶೀಘ್ರದಲ್ಲೇ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅಶ್ವಿನ್ ಉತ್ತರಿಸಿದರು.

ತಾಂತ್ರಿಕ ಕಾರಣಗಳು ಏನೇ ಇದ್ದರೂ ಅದನ್ನು ಬೇಗ ಸರಿಪಡಿಸಿ ನಿವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕುಡಿಯುವ ನೀರು ಪೂರೈಸಿ ಎಂದು ಶಾಸಕರು ಸೂಚಿಸಿದರು.

ಬಿಡಾಡಿ ದನಗಳ ಸಮಸ್ಯೆ ಬಗೆ ಹರಿಸಿ: ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿದ ಆಸ್ತಿ ಪಾಳು ಬಿದ್ದಿರುವುದರ ಬಗ್ಗೆಯೂ ದೂರು ಸಲ್ಲಿಸಿದರು. ಜತೆಗೆ ಎಲ್ಲೆಂದರಲ್ಲಿ ಬಿಡಾಡಿ ದನಗಳು ತಿರುಗಾಡುವುದರಿಂದ ಜನರು ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು ಇದರಿಂದ ಮುಕ್ತಿ ನೀಡಬೇಕು. ಪುಂಡರು ವ್ಹೀಲಿಂಗ್ ಮಾಡುವುದರ ಜತೆಗೆ ಅತಿ ವೇಗವಾಗಿ ತೆರಳಿ ರಸ್ತೆಯಲ್ಲಿ ಕಿರಿಕಿರಿ ಮಾಡುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಮನವಿ ಆಲಿಸಿದ ಶಾಸಕರು, ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ತಿಲಕ್‌ನಗರದ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯ ಕಾಂಪೌಂಡ್ ಹಾಳಾಗಿರುವುದನ್ನು ಕಂಡ ಶಾಸಕರು, ಅದನ್ನು ಆದಷ್ಟು ಬೇಗ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಪಾದಯಾತ್ರೆಯಲ್ಲಿ ಮಾಜಿ ಮೇಯರ್ ಅನಂತು, ನಗರಪಾಲಿಕೆ ಮಾಜಿ ಸದಸ್ಯ ನಂದಕುಮಾರ್, ಕಾಂಗ್ರೆಸ್ ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಯಪ್ಪ, ಮುಖಂಡ ಎಚ್.ಎಸ್.ಸುಜಿತ್ ಕುಮಾರ್, ಮಂಜುನಾಥ್, ರಾಜ ಗಣೇಶ್, ಸಾಕಮ್ಮ, ಯೋಗಿ, ಪವನ್, ಬೆನಕ, ಎಸ್.ಮಂಜುನಾಥ್, ಸುರೇಶ್, ವೆಂಕಟೇಶ್, ರಾಜಾ ರಾಜೇಂದ್ರ ಇತರರಿದ್ದರು.

ಚಿತ್ರ ಸಂಖ್ಯೆ...1

*ಶಾಸಕ ಕೆ.ಹರೀಶ್‌ಗೌಡ ಸೋಮವಾರ ತಿಲಕ್ ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಅನಂತು, ನಂದಕುಮಾರ್, ರಮೇಶ್ ರಾಯಪ್ಪ, ಎಚ್.ಎಸ್.ಸುಜಿತ್ ಕುಮಾರ್, ಮಂಜುನಾಥ್, ರಾಜ ಗಣೇಶ್, ಸಾಕಮ್ಮ, ಯೋಗಿ, ಪವನ್, ಬೆನಕ, ಎಸ್.ಮಂಜುನಾಥ್, ಸುರೇಶ್, ವೆಂಕಟೇಶ್, ರಾಜಾ ರಾಜೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net