ಶಾಸಕ ಕೆ.ಹರೀಶ್ ಗೌಡ ಅವರಿಂದ ಕೆ.ಆರ್.ಆಸ್ಪತ್ರೆ ನವೀಕರಣ ಕಾಮಗಾರಿ ಪರಿಶೀಲನೆ

21
Published on

ಮೈಸೂರು: ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಹಾಗೂ ಪಿ.ಕೆ.ಟಿ.ಬಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿವಿಧ ನವೀಕರಣ ಕಾಮಗಾರಿಯನ್ನು ಶಾಸಕ ಕೆ.ಹರೀಶ್‌ಗೌಡ ಸೋಮವಾರ ಪರಿಶೀಲಿಸಿದರು.
ಕೆ.ಆರ್.ಆಸ್ಪತ್ರೆಯ ಆಡಳಿತ ವಿಭಾಗದ ಕಟ್ಟಡಗಳಿಗೆ ಮಾಡಿರುವ ಬಣ್ಣ ಕೈಯಲ್ಲಿ ಮುಟ್ಟಿದರೆ ಕಳಚಿ ಬೀಳುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಸಂಬಂಧಪಟ್ಟ ಗುತ್ತಿಗೆದಾರರು, ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಶೀಘ್ರವೇ ಕಾಮಗಾರಿ ಮುಗಿಸಲು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ದ್ರಾಕ್ಷಾಯಿಣಿ, ಗುತ್ತಿಗೆದಾರರು, ಸಂಬಂಧಪಟ್ಟ ಇಂಜಿನಿಯರ್‌ಗೆ ನಿರ್ದೇಶನ ನೀಡಿದರು.
ಚಲುವಾಂಬ ಆಸ್ಪತ್ರೆ, ಪಿ.ಕೆ.ಟಿ.ಬಿ ಆಸ್ಪತ್ರೆಯ ಕಟ್ಟಡ, ಮಹಿಳಾ ಒಪಿಡಿ ಬ್ಲಾಕ್‌ಗಳಿಗೆ ಭೇಟಿ ನೀಡಿ ಗುಣಮಟ್ಟದೊಂದಿಗೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಆವರಣದಲ್ಲಿರುವ ಕ್ಯಾಂಟೀನ್ ಅನ್ನು ಮಾಜಿ ಸೈನಿಕರಿಗೆ ಮಂಜೂರು ಮಾಡಲಾಗಿತ್ತು. ಆದರೀಗ ಅದನ್ನು ಉಪ ಗುತ್ತಿಗೆ ನೀಡಿರುವ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಅಲ್ಲದೆ ಕ್ಯಾಂಟೀನ್‌ನಲ್ಲಿ ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅಲ್ಲಿದ್ದವರು ದೂರಿದಾಗ, ಕ್ಯಾಂಟೀನ್ ನಡೆಸುವವರಿಗೆ ದರ ಪಟ್ಟಿಯನ್ನು ಪ್ರದರ್ಶಿಸುವಂತೆ ತಿಳಿಸಿದರು.
ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಹಾಗೂ ಡೀನ್ ಡಾ.ಕೆ.ಆರ್. ದಾಕ್ಷಾಯಿಣಿ, ಚಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೆಂದ್ರ ಕುಮಾರ್, ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೊರೆಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net