

ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ‘ಇಂದಿರಾ ಕ್ಯಾಂಟೀನ್’ಅನ್ನು ಸೋಮವಾರ ಶಾಸಕ ಕೆ.ಹರೀಶ್ ಗೌಡ ಉದ್ಘಾಟಿಸಿದರು. ಅವರಿಗೆ ಮಹಾರಾಣಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಾಥ್ ನೀಡಿದರು.
ಕೆ.ಹರೀಶ್ ಗೌಡ ಮಾತನಾಡಿ, ಸಿದ್ದರಾಮಯ್ಯನವರು ಮೊದಲನೇ ಬಾರಿಗೆ ಮುಖ್ಯಮಂತ್ರಿಯಾದಾಗ ಶ್ರಮಿಕ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ತಿಂಡಿ, ಊಟ ಸಿಗಬೇಕು ಎಂಬ ಉದ್ದೇಶದಿಂದ ರಾಜ್ಯದ ಹಲವೆಡೆ ಜನನಿಬಿಡ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ 9 ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದ್ದಾರೆ ಎಂದರು.
ನನ್ನ ಕ್ಷೇತ್ರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ಬಹು ದಿನದ ಬೇಡಿಕೆಯಾದ ಈ ಕ್ಯಾಂಟೀನ್ ಆರಂಭವಾಗಿರುವುದು ಸಂತೋಷವಾಯಿತು. ಇದರಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಹಳ ಖುಷಿಯಾಗಿದೆ. ಎಲ್ಲರೂ ಕಡಿಮೆ ವೆಚ್ಚದಲ್ಲಿ ತಿಂಡಿ ಊಟ ಸಿಗುತ್ತಿರುವುದರಿಂದ ಹರ್ಷ ವ್ಯಕ್ತಪಡಿಸಿದರು.