ವರ್ಚಸ್ಸಿನ ನಾಯಕ ಯಡಿಯೂರಪ್ಪ : ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣನೆ

28Tmk_BSY_Birthday_GBJ
Published on

ತುಮಕೂರು: ಯಡಿಯೂರಪ್ಪ ಅವರೊಂದು ಶಕ್ತಿ. ಹೋರಾಟದ ಹಿನ್ನೆಲೆಯಿಂದ ಬಂದ ಅವರು ಯಾರದ್ದೋ ಮರ್ಜಿಯಿಂದ ನಾಯಕರಾದವರಲ್ಲ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣಿಸಿದರು.

ಕ್ಯಾತಸಂದ್ರದ ನಾಗರತ್ನಮ್ಮಕೆ.ಎನ್.ರುದ್ರಯ್ಯ ಸಮುದಾಯ ಭವನದಲ್ಲಿ ಬಿಎಸ್‌ವೈ ಅಭಿಮಾನಿ ಬಳಗ, ಆಟೋಚಾಲಕ ಕೆ.ಎಂ.ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ನೋವು, ಅವಮಾನಗಳು, ಸಂಕಟವನ್ನು ಅನುಭವಿಸಿರುವ ಯಡಿಯೂರಪ್ಪ ಅದನ್ನೆಲ್ಲ ಮೆಟ್ಟಿನಿಂತು ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಛಲಗಾರ ಎಂದರು.

ದೇವರಾಜ ಅರಸು, ರಾಮಕೃಷ್ಣ ಹೆಗಡೆ, ವೀರೇಂದ್ರಪಾಟೀಲ್, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್‌ರಂತೆ ರಾಜ್ಯರಾಜಕಾರಣದಲ್ಲಿ ವಿಶೇಷ ಸಾಲಿನಲ್ಲಿ ನಿಲ್ಲುವ ವರ್ಚಸ್ಸಿನ ನಾಯಕ ಯಡಿಯೂರಪ್ಪ. ಸಾಮಾನ್ಯ ಕುಟುಂಬದಿಂದ ಬಂದ ಯಡಿಯೂರಪ್ಪ ಅವರಿಗೆ ಬಡವರ ಕಷ್ಟಕಾರ್ಪಣ್ಯಗಳ ಅರಿವಿದೆ. ಹಾಗಾಗಿ, ಜನನಾಯಕರಾಗಿ ಬೆಳೆದು ನಿಂತಿದ್ದಾರೆ ಎಂದು ಹೇಳಿದರು.

ಪಕ್ಷಾತೀತ ಕಾರ್ಯಕ್ರಮ: ಬೆಂಗಳೂರಿನಲ್ಲಿ ಗುರುವಾರ ನಡೆದ ಯಡಿಯೂರಪ್ಪ ಅವರ ಹುಟ್ಟುಹಬ್ಬ ಸಮಾರಂಭ ಪಕ್ಷಾತೀತ ಕಾರ್ಯಕ್ರಮವಾಗಿತ್ತಲ್ಲದೆ ರಾಜ್ಯ ರಾಜಕೀಯದಲ್ಲೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಅಲ್ಲದೆ, ರಾಜಕೀಯವಾಗಿ ಇದೊಂದು ಮಾದರಿ ಸಮಾರಂಭ ಎನಿಸಲಿದೆ ಎಂದು ಜ್ಯೋತಿಗಣೇಶ್ ತಿಳಿಸಿದರು.

ರಾಜಕೀಯ ಭಿನ್ನಾಭಿಪ್ರಾಯ ಮರೆತು ಸಿದ್ದರಾಮಯ್ಯ ಸೇರಿ ರಾಜಕೀಯ ಮುಖಂಡರು ಪ್ರೀತಿ, ಸ್ನೇಹದಿಂದ ಬಿಎಸ್‌ವೈ ಕುರಿತು ಅಭಿಮಾನದ ಮಾತುಗಳನ್ನಾಡಿದ್ದು ವಿಶೇಷವೆನಿಸಿತ್ತು. ಎಲ್ಲ ಜಾತಿ, ವರ್ಗದ ನಾಯಕರಾಗಿ ಬಿಎಸ್‌ವೈ ಗುರುತಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು ಎಂದರು. ಜನಪರ ಹೋರಾಟವನ್ನೇ ಉಸಿರಾಗಿಸಿಕೊಂಡ ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಮಲ ಅರಳುವಂತೆ ಮಾಡಿದ್ದಲ್ಲದೆ, ಬದುಕಿನುದ್ದಕ್ಕು ಹೋರಾಟ ಮಾಡಿ ಪಕ್ಷವನ್ನು ಸಂಘಟಿಸಿದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಹೇಳಿದರು.

ಹಿರಿಯ ಪತ್ರಕರ್ತ ಆರ್.ಎಸ್.ಅಯ್ಯರ್ ಅವರನ್ನು ಸನ್ಮಾಸಿಲಾಯಿತು. ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರವನ್ನು ಜ್ಯೋತಿಗಣೇಶ್ ವಿತರಿಸಿದರು. ಉಪಮೇಯರ್ ಶಶಿಕಲಾ, ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್, ಕಾರ್ಪೋರೇಟರ್‌ಗಳಾದ ವಿಷ್ಣುವರ್ಧನ್, ಎಸ್.ಮಂಜುನಾಥ್, ನವೀನಾ, ನಳಿನಾ, ಎಚ್.ಎಂ.ದೀಪಶ್ರೀ, ಬಿ.ಜಿ.ವೀಣಾ, ಕೆ.ಎಸ್.ಮಂಜುಳಾ, ಚಂದ್ರಕಲಾ ಬಿಜೆಪಿ ಮುಖಂಡ ರುದ್ರೇಶ್, ಕೆ.ಎಸ್.ಅರುಣ್‌ಕುಮಾರ್, ಕೆ.ಜಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಇದ್ದರೂ, ನಾನೆಂದೂ ದ್ವೇಷದ ರಾಜಕೀಯವನ್ನು ಮಾಡುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಎಂದಿಗೂ ಮನುಷ್ಯ ಸಂಬಂಧಗಳನ್ನು ಕಡಿದುಹಾಕಬಾರದು. ಈ ಸಿದ್ಧಾಂತವನ್ನು ನಾನು ಪಾಲಿಸುತ್ತಿದ್ದೇನೆ. ಇದನ್ನೇ ಜನರೂ ಇಷ್ಟ ಪಡುತ್ತಾರೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net