ನಾಯಿಕೊಡೆಗಳಾಗಿವೆ ಆಂಧ್ರ ಶಿಕ್ಷಣ ಸಂಸ್ಥೆಗಳು: ಶಾಸಕ ಜ್ಯೋತಿಗಣೇಶ್

10Tmk_PrivateSchool_Protest
Published on

ತುಮಕೂರು: ನಗರದಲ್ಲಿ ಕಾನೂನುಬಾಹಿರವಾಗಿ ತಲೆಎತ್ತಿರುವ ಆಂಧ್ರ ಮೂಲದ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಎಚ್ಚರಿಕೆ ನೀಡಿದರು.

ಕಾನೂನುಬಾಹಿರ ಕಾರ್ಪೋರೇಟ್ ಶಾಲೆಗಳ ಜತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವುದನ್ನು ಖಂಡಿಸಿ ಸೋಮವಾರ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಮುಂಭಾಗ ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು. ಕಾರ್ಖಾನೆ, ಬಟ್ಟೆ ಅಂಗಡಿಗಳಂತೆ ಶಾಖೆಗಳನ್ನು ಮಾಡಿಕೊಂಡು ಶಿಕ್ಷಣ ವ್ಯಾಪಾರೀಕರಣಗೊಳಿಸಿದ್ದು ಶಿಕ್ಷಣಕ್ಕೆ ಶೋಭೆ ತರುವಂತದಲ್ಲ ಎಂದು ಹರಿಹಾಯ್ದರು.

ಆಂಧ್ರ ಮೂಲದ ಶಿಕ್ಷಣ ಸಂಸ್ಥೆಗಳು ಕಾನೂನುಗಳನ್ನು ಉಲ್ಲಂಘಿಸಿ ಶಾಖೆಗಳನ್ನು ತೆರೆದು 40-50 ವರ್ಷ ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಕನ್ನಡಿಗರ ಒಡೆತನದ ಶಾಲೆಗಳಿಗೆ ಉಳಿಗಾಲವಿಲ್ಲದಂತೆ ಮಾಡಿದ್ದಾರೆ. ನೆರೆರಾಜ್ಯಗಳಲ್ಲಿ ನೂರಾರು ಶಾಲೆಗಳನ್ನು ಹೊಂದಿರುವವರು ನಗರಕ್ಕೆ ಕಾಲಿಟ್ಟಿದ್ದು ಪಾಲಕರನ್ನು ವಂಚಿಸುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಸಂಸ್ಥೆಗಳಿಗೆ ಬೆಂಬಲವಾಗಿ ನಿಲ್ಲುವುದನ್ನು ಸಹಿಸುವುದಿಲ್ಲ. ಸಣ್ಣಪುಟ್ಟ ಶಿಕ್ಷಣ ಸಂಸ್ಥೆಗಳಿಗೆ ಬಾಕಿಯಿರುವ ಆರ್‌ಟಿಇ ಹಣ ಬಿಡುಗಡೆ ಮಾಡಬೇಕು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಎಂದು ಎಚ್ಚರಿದರು.

ಅಧಿಕಾರಿಗಳು ಶಾಮೀಲು: ಕಾರ್ಪೋರೇಟ್ ಶಾಲೆಗಳಿಗೆ ನಿಯಮಬಾಹಿರವಾಗಿ ಅನುಮತಿ ನೀಡುವ ಅಧಿಕಾರಿಗಳು ಇಲಾಖೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ. ಇದರಿಂದ 40-50 ವರ್ಷ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಹಾಲನೂರು ಲೇಪಾಕ್ಷ ಆರೋಪಿಸಿದರು. ಅಧಿಕಾರಿಗಳು ದೊಡ್ಡ, ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುತ್ತಿರುವುದರಿಂದ 15-20 ವರ್ಷಗಳಿಂದ ಶಿಕ್ಷಣ ನೀಡಿತ್ತಿರುವ ಸ್ಥಳೀಯ ಸಂಸ್ಥೆಗಳಿಗೆ ಮುಚ್ಚುವ ಭೀತಿ ಎದುರಾಗಿದೆ. ಕಾನೂನು ರೀತಿಯಲ್ಲೇ ಹೊರರಾಜ್ಯಗಳ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ಕೊಡಿ. ಇಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ನೀಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ಸೀತಾರಾಂ ಹೇಳಿದರು.

ಮನವಿ: ಶೈಕ್ಷಣಿಕ ವರ್ಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬಾಕಿ ಇರುವಾಗಲೇ ದಾಖಲಾತಿ ಪ್ರಾರಂಭಿಸಿವೆ. ಇನ್ನು ಸಿಬಿಎಸ್‌ಇ ಅನುಮತಿ ಪಡೆಯದೇ ಕಾನೂನುಬಾಹಿರವಾಗಿ ಶಾಲೆಗಳನ್ನು ನಡೆಸುತ್ತಿವೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದರ ವಿರುದ್ಧ ಕ್ರಮಕೈಗೊಳ್ಳುವುದೂ ಸೇರಿ 8 ಬೇಡಿಕೆಗಳ ಮನವಿಯನ್ನು ಡಿಡಿಪಿಐ ಕಾಮಾಕ್ಷಿ ಅವರಿಗೆ ಒಕ್ಕೂಟದ ವತಿಯಿಂದ ನೀಡಲಾಯಿತು. ಉಪಾಧ್ಯಕ್ಷರಾದ ಎನ್.ಬಿ.ಪ್ರದೀಪ್‌ಕುಮಾರ್, ಲ್ಯಾನ್ಸಿ ಎಚ್.ಪಾಯಸ್, ಎನ್.ಪಿ.ರವೀಂದ್ರನಾಥ್, ಎಸ್.ಶಿವಪ್ರಕಾಶ್, ಕಾರ್ಯದರ್ಶಿ ಜಿ.ವಿ.ಶ್ರೀನಿವಾಸರಾಂ, ಜಂಟಿ ಕಾರ್ಯದರ್ಶಿ ಬಿ.ಲೋಕೇಶ್ ಕುಮಾರ್, ಎಚ್.ಎನ್.ಮಂಜುನಾಥ್, ಟಿ.ಚಂದ್ರಶೇಖರ್, ಜೆ.ಆರ್.ಚನ್ನಬಸವೇಶ್ವರಸ್ವಾಮಿ, ನಿಖಿಲ್ ಎಸ್.ಮಿರ್ಜಿ, ಕೆ.ನಯಾಜ್ ಅಹ್ಮದ್ ಮತ್ತಿತರರು ಹಾಜರಿದ್ದರು.

ದೊಡ್ಡ ದೊಡ್ಡ ಸಂಸ್ಥೆಗಳು ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಇಂತಹ ಸಂಸ್ಥೆಗಳಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಬಟ್ಟೆ, ಈರುಳ್ಳಿ ಅಂಗಡಿಗಳಂತೆ ಬ್ರಾಂಚ್‌ಗಳನ್ನು ತೆರೆದು ಪಾಲಕರನ್ನು ಸುಲಿಗೆ ಮಾಡುತ್ತಿವೆ. ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕ ಜಿಲ್ಲೆ ಎಂದು ಹೆಸರು ತಂದವರಿಂದು ಮೂಲೆಗುಂಪಾಗಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ ಪಾಲಕರಿಗೆ, ಸಾರ್ವಜನಿಕರಿಗೆ ಅನ್ಯಾಯ ಮಾಡಿಕೊಂಡೆ ಇವರು ಕೂಡ ಖಾಸಗಿ ಶಾಲೆ ನಡೆಸುತ್ತಿರುವುದು. ಸೇವೆಗಾಗಿ ಇವರೇನು ಸಂಸ್ಥೆಗಳನ್ನು ನಡೆಸುತ್ತಿಲ್ಲ. ವೈಯಕ್ತಿಕ ಅಭಿವೃದ್ಧಿಗಾಗಿ ನಡೆಸುತ್ತಿರೋದು. ಸಮಾಜಕ್ಕೆ ಖಾಸಗಿ ಶಾಲೆಗಳು ಅನಿವಾರ್ಯವಲ್ಲ. ಹೋಟೆಲ್‌ಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಜನ ಮನೆ ಊಟ ಬಿಟ್ಟು ಹೋಟೆಲ್‌ಗಳಿಗೆ ಹೋದಂತೆ ಶಾಲೆಗಳು ಹೆಚ್ಚಾದಂತೆ ಆ ಕಡೆ ಆಕರ್ಷಣೆಗೊಳ್ಳುತ್ತಿದ್ದಾರೆ. ಕಾಮಾಕ್ಷಿ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net