

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಕಡೆಗೆ ತಮ್ಮ ಮನಸೋ ಇಚ್ಛೆ ಪುನರ್ ವಸತಿ ಕೇಂದ್ರಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಬಾಗಲಕೋಟೆ ಆರ್ ಆ್ಯಂಡ್ ಆರ್ ಅಧಿಕಾರಿಗಳ ವಿರುದ್ಧ ಬೀಳಗಿ ಶಾಸಕ ಜೆ.ಟಿ.ಪಾಟೀಲ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣಲ್ಲಿ ಸೋಮವಾರ ಸಂಜೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಯುಕೆಪಿಗೆ ಸಂಬಂಧಿಸಿದ ಬಾಗಲಕೋಟೆ ಜಿಲ್ಲೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕರ ಮಾತನಾಡಿದರು.
ಭೂಸ್ವಾಧೀನದಲ್ಲಿ ಸಂತ್ರಸ್ಥರಿಗೆ ಯಾವ ರೀತಿ ಪರಿಹಾರ ನೀಡಬೇಕು, ಕಾನೂನು ಏನು ಹೇಳುತ್ತದೆ ಎಂದು ಮೊದಲು ಅಧ್ಯಯನ ಮಾಡಿ. ಸಮಸ್ಯೆ ಇದ್ದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಚರ್ಚೆಯ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿ ಎಂದು ಸೂಚಿಸಿದರು.
ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಜನವಸತಿ ಇರುವಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು. ಪುನರ್ ವಸತಿ ಕೇಂದ್ರಗಳಲ್ಲಿ ಜನರು ಬಂದು ವಾಸ ಮಾಡುತ್ತಿದ್ದರೆ ಅಲ್ಲಿ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸ್ಮಶಾನ ಒಳಗೊಂಡು ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ ಎಂದರು.
ಇನ್ನೂ 10 ರಿಂದ 15 ವರ್ಷಗಳ ನಂತರ ಜನ ಬಂದು ವಾಸಿಸುವ ಪುನರ್ ವಸತಿ ಕೇಂದ್ರಗಳಲ್ಲಿ ಈಗಾಗಲೇ ಗ್ರಂಥಾಲಯ ನಿರ್ಮಿಸಿರುವುದು, ಮನೆಗಳು ಇಲ್ಲದೇ ಇರುವಲ್ಲಿ ಶೌಚಾಲಯ ನಿರ್ಮಿಸಿರುವುದು ಇವುಗಳೆಲ್ಲ ಅಧಿಕಾರಿಗಳು ಬೇರೆ ಉದ್ದೇಶದಿಂದ ನಿರ್ಮಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಎಂದೂ ಪ್ರವಾಹ ಬರದೇ ಇರುವಂತಹ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. 17 ರಿಂದ 31 ಕಾಮಗಾರಿಗಳನ್ನು ಕೈಗೊಂಡಿದ್ದು, ಮೊದಲ 17 ಕಾಮಗಾರಿಗಳಿಗೆ 28 ಕೋಟಿ ರೂಪಾಯಿ, 31 ಕಾಮಗಾರಿಗೆ 52 ಕೋಟಿ ಖರ್ಚು ಮಾಡಿ ಹಾಳು ಮಾಡಿದ್ದು ಇರುತ್ತದೆ ಎಂದು ಅಧಿಕಾರಿಗಳ ಕ್ರಮಕ್ಕೆ ಬೇಸರ ಹೊರಹಾಕಿದರು.
ಪುನರ್‌ವಸತಿಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಇದರಿಂದ ಜನರು ಜನಪ್ರತಿನಿಧಿಗಳನ್ನು ಕೇಳಿದಾಗ ಯಾವೆಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಅನಾವಶ್ಯಕವಾಗಿ ಹಣ ವ್ಯಯವಾಗುವುದನ್ನು ತಡೆಗಟ್ಟಬೇಕು ಎಂದರು.
ಸಭೆಯಲ್ಲಿ ಶಾಸಕ ಎಚ್.ವೈ. ಮೇಟಿ, ಎಂಎಲ್‌ಸಿಗಳಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ್, ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಾಧಿಕಾರದ ಮಹಾ ವ್ಯವಸ್ಥಾಪಕ ರಮೇಶ ಕಳಸದ ಸೇರಿದಂತೆ ಇತರರು ಇದ್ದರು.