

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ಜನರಿಗೆ ಉಪಯೋಗವಾಗುವ ಕೆಲಸವೂ ಆಗಿಲ್ಲ, ಅಭಿವೃದ್ಧಿಯನ್ನು ಮಾಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿದೆ. ಹೀಗಿರುವಾಗ ಟೆಂಡರ್ ಹೆಸರಿನಲ್ಲಿ ಅಡ್ಡಗಾಲು ಹಾಕಿ ಅಭಿವೃದ್ಧಿ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಡಿ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ವಿರುದ್ಧ ಶಾಸಕ ರವಿಕುಮಾರ್ ಗಣಿಗ ತೀವ್ರ ವಾಗ್ದಾಳಿ ನಡೆಸಿದರು.
ತಾಲೂಕಿನ ಬಸರಾಳು ಹೋಬಳಿ ಚಂದಗಾಲು ಗ್ರಾಮದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ‘ನಿಮ್ಮ ಊರಿಗೆ ನಿಮ್ಮ ಶಾಸಕರು’ ಶೀರ್ಷಿಕೆಯಡಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ನಡೆಯಬಾರದೆಂದು ಕಾಮಗಾರಿಗಳಿಗೆ ಟೆಂಡರ್ ಹಾಕಿ ಸಮಯ ವ್ಯರ್ಥ ಮಾಡಿದ ಮಾತ್ರಕ್ಕೆ ರಾಜಕೀಯ ಮೇಲಾಟ ಆಗಲ್ಲ. ಟೆಂಡರ್‌ಗಳಿಗೆ ನಿಲ್ಲಿಸಿರುವವರ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದೇನೆ. ಇನ್ನಾದರೂ ಅಂತಹ ಕೆಲಸಕ್ಕೆ ಮುಂದಾಗಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ಬುದ್ಧಿ ಕಲಿಸಿ ಅವರ ಮನೆ ಮುಂದೆ ಧರಣಿ ನಡೆಸುವ ಕಾಲ ಬರುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.
ಕಳೆದ ಚುನಾವಣೆಯಲ್ಲಿ ನಾನು ಸೋಲು ಅನುಭವಿಸಿದ್ದೆ. ಆಗಲೂ ನಾನು ಯಾವುದೇ ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ. ಆದರೆ ಈಗ ಗುತ್ತಿಗೆ ಹಾಗೂ ರಾಜಕಾರಣ ಎರಡು ಮಾಡಿದರೆ ಮಂಡ್ಯ ಕ್ಷೇತ್ರ ಅಭಿವೃದ್ಧಿ ಆಗಲ್ಲ. ಕೀಲಾರ-ತುಂಬಕೆರೆ ರಸ್ತೆ, ಗಣಿಗ ರಸ್ತೆ ಕಾಮಗಾರಿ ನಿಲ್ಲಿಸಿದ್ದಾರೆ. ಇಂತಹವುದನ್ನು ನಿಲ್ಲಿಸಬೇಕು. ಗುತ್ತಿಗೆ ಅಥವಾ ರಾಜಕಾರಣ ಎರಡರಲ್ಲಿ ಒಂದನ್ನು ಮುಂದುವರೆಸಿ. ಇಲ್ಲದಿದ್ದರೆ ನಿಮ್ಮ ದಬ್ಬಾಳಿಕೆಗೆ ಮಂಡ್ಯ ಕ್ಷೇತ್ರದ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
ನಿಮ್ಮ ಊರಿಗೆ ನಿಮ್ಮ ಶಾಸಕ ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳನ್ನು ಕರೆದುಕೊಂಡು ಬಂದು ಜನತಾದರ್ಶನ ಹಮ್ಮಿಕೊಳ್ಳಲಾಗಿದೆ. ಕೋರ್ಟ್ ವ್ಯಾಜ್ಯ ಇರುವುದನ್ನು ಬಿಟ್ಟು ಸ್ಥಳದಲ್ಲೇ ಸಾಧ್ಯವಾದಷ್ಟು ಬಗೆಹರಿಸುವ ಅಥವಾ 21 ದಿನದಲ್ಲಿ ಸಮಸ್ಯೆಗಳ ಕೆಲಸ ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 30 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಒಟ್ಟಾರೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1,300 ಕೋಟಿ ರೂ ವೆಚ್ಚದ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಮದ್ದೂರಿನ ಸಾಧನ ಸಮಾವೇಶ ಮುಗಿದ ನಂತರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟ ನಂತರ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 1,300 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.
ಶ್ರೀರಂಗಪಟ್ಟಣದಿಂದ ಕಾವೇರಿ ನೀರನ್ನು ತಂದು ಬಸರಾಳು, ದೇವಲಾಪುರ ಹಾಗೂ ಹೊಣಕೆರೆ ಮೇಲ್ಬಾಗದ ಹಳ್ಳಿಗಳ ಕೆರೆ ತುಂಬಿಸುವ 1,000 ಕೋಟಿ ರೂ ವೆಚ್ಚದ ಯೋಜನೆಗೆ ನೀಲನಕ್ಷೆ ಹಾಗೂ ಡಿಪಿಆರ್ ಸಿದ್ಧವಾಗಿದೆ. ಮಾತ್ರವಲ್ಲದೆ ಸಿಎಂ ಕೂಡ ಒಪ್ಪಿಗೆ ನೀಡಿದ್ದಾರೆ. ಇದಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅನುದಾನದಲ್ಲಿ ಶಾಸಕರಿಗೆ 50 ಕೋಟಿ ರೂ ಅನುದಾನ ಕೊಟ್ಟಿದ್ದಾರೆ. ಅವರಿಗೆ ಮಂಡ್ಯ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷ ಅನುದಾನದಲ್ಲಿ 3 ಕೋಟಿ ರೂ ವೆಚ್ಚದಲ್ಲಿ ಕೆರಗೋಡು ಪಂಚಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಶೀಘ್ರ ಭೂಮಿ ಪೂಜೆ ನೆರವೇರಿಸುತ್ತೇನೆ. ಅಂತೆಯೇ ಮುಂದಿನ ದಿನಗಳಲ್ಲಿ ಚಂದಗಾಲು ಹಾಗೂ ಹೊಸಗಾವಿ ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರ ಸಭೆ ಕರೆದು ಮಲೈ ಮಹದೇಶ್ವರ ದೇವಾಲಯದ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿ ಮಾಡಲಾಗುವುದು ಎಂದರು.
ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್, ಚಂದಗಾಲು ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ತಾಪಂ ಮಾಜಿ ಸದಸ್ಯ ಚಿಕ್ಕಬಳ್ಳಿಕೃಷ್ಣ, ದ್ಯಾಪಸಂದ್ರ ಉಮೇಶ್, ಪಿಡಿಒ ಅಶ್ವಿನಿ ಇತರರಿದ್ದರು.
ಇದೇ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಸರ್ಕಾರದ ವಿವಿಧ ಯೋಜನೆ ಬಗ್ಗೆ ಮಾಹಿತಿ ನೀಡಲು ಮಳಿಗೆ ಹಾಕಲಾಗಿತ್ತು. ಅಂತೆಯೇ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಸೇವೆ ಪಡೆದುಕೊಂಡರು. ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು. ಶಾಸಕ ರವಿಕುಮಾರ್ ಗಣಿಗ ಅರ್ಜಿಯನ್ನು ಸ್ವೀಕರಿಸಿಕೊಂಡು ಶೀಘ್ರ ಬಗೆಹರಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಶಾಸಕ ರವಿಕುಮಾರ್ ಗಣಿಗ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಗಣ್ಯರನ್ನು ಎತ್ತಿನಗಾಡಿ ಮೆರವಣಿಗೆ ಮೂಲಕ ವೇದಿಕೆವರೆಗೆ ಕರೆದುಕೊಂಡು ಬರಲಾಯಿತು.
ಜನರ ಕೈಗೆ ಸಿಗುವ ಶಾಸಕ ರವಿಕುಮಾರ್
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಹಲವರು ಶಾಸಕರಾಗಿದ್ದಾರೆ. ಆದರೆ ಅಧಿಕಾರಿಗಳನ್ನು ಕರೆದುಕೊಂಡು ಜನರ ಬಳಿಗೆ ಬಂದು ಅವರ ಸಮಸ್ಯೆ ಕೇಳುವ ಶಾಸಕ ರವಿಕುಮಾರ್ ಗಣಿಗ ಅವರ ಕಾರ್ಯವೈಖರಿ ಜನಮೆಚ್ಚುಗೆ ಗಳಿಸಿದೆ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಚಂದಗಾಲು ಗ್ರಾಮಕ್ಕೆ ಐದರಿಂದ ಆರು ಬಾರಿ ಬಂದಿದ್ದಾರೆ. ಒಟ್ಟಾರೆ ಜನರ ಕೈಗೆ ಸಿಗುವ ಶಾಸಕ ಎಂದು ಶ್ಲಾಘಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜನತಾದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶಾಸಕ ರವಿಕುಮಾರ್ ಗಣಿಗ ಪ್ರತಿ ಗ್ರಾಮದಲ್ಲಿಯೂ ಒಂದಲ್ಲ ಒಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಜಿಲ್ಲಾ ಕೇಂದ್ರಕ್ಕೆ ಹತ್ತಾರೂ ಕಿ.ಮೀ ಅಲೆದಾಡಬಾರೆನ್ನುವ ಕಾರಣಕ್ಕೆ 44 ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಮಾತ್ರವಲ್ಲದೆ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಇಂತಹ ಶಾಸಕರು ಹೆಚ್ಚು ಬಾರಿ ಆಯ್ಕೆಯಾಗಬೇಕೆಂದು ಹೇಳಿದರು.