ದೇಶಿಯ ಟೈಲರ್ಸ್‌ಗಳನ್ನು ಪ್ರೋತ್ಸಾಹಿಸಿ; ಶಾಸಕ ಜೆ.ಎನ್.ಗಣೇಶ್

05 KAMPLI 02
ಕಂಪ್ಲಿಯಲ್ಲಿ ಜರುಗಿದ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್(ಕೆಎಸ್‌ಟಿಎ) ಕಂಪ್ಲಿ ವಲಯದ ಪ್ರಥಮ ಸಮ್ಮೇಳನಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ಪ್ರಮುಖರಾದ ಕೆ.ರಾಜೇಶ್, ನಾರಾಯಣರಾವ್, ಪ್ರಜ್ವಲ್‌ಕುಮಾರ್, ಕೆ.ಸಿದ್ದಪ್ಪ, ಸಿ.ಆರ್.ಹನುಮಂತ ಇತರರಿದ್ದರು.
Published on

ಕಂಪ್ಲಿ: ಸ್ವದೇಶಿ ಉಡುಪುಗಳನ್ನು ಧರಿಸುವ ಮೂಲಕ ದೇಶಿಯ ಟೈಲರ್ಸ್‌ಗಳ ಪ್ರೋತ್ಸಾಹಿಸಿ, ಬೆಳಸಬೇಕೆಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.


ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್(ಕೆಎಸ್‌ಟಿಎ) ಏರ್ಪಡಿಸಿದ್ದ ಕಂಪ್ಲಿ ವಲಯದ ಪ್ರಥಮ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರಳಿಹಳ್ಳಿ ತಾಂಡದಲ್ಲಿ ಒಂಬತ್ತು ಎಕರೆ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಮೀಸಲಿಟ್ಟಿದ್ದು, 500 ಟೈಲರ್ಸ್‌ಗಳಿಗೆ ಬಟ್ಟೆ ಹೊಲಿಯುವ ಕೆಲಸ ದೊರಕಿಸಿ ಕೊಡಲಾಗುವುದು. ಪಟ್ಟಣದಲ್ಲಿ ಟೈಲರ್ಸ್‌ ಸಮುದಾಯ ಭವನಕ್ಕಾಗಿ ಪುರಸಭೆ ನಿವೇಶನ ಒದಗಿಸಿದಲ್ಲಿ, ನಿರ್ಮಾಣಕ್ಕಾಗಿ 25 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.


ಕೆಎಸ್‌ಟಿಎ ರಾಜ್ಯಾಧ್ಯಕ್ಷ ನಾರಾಯಣರಾವ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ಕುಮಾರ್ ಮಾತನಾಡಿ, ರಾಜ್ಯದ 10 ಲಕ್ಷ ಟೈಲರ್ಸ್‌ಗಳಿದ್ದು ಅವರನ್ನು ಕಾರ್ಮಿಕರೆಂದು ಪರಿಗಣಿಸಿ, ಕಟ್ಟಡ ಕಾರ್ಮಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಜನಪ್ರತಿನಿಧಿಗಳು ಸದನದಲ್ಲಿ ಟೈಲರ್ಸ್‌ ಪರ ಧ್ವನಿ ಎತ್ತಬೇಕು. ರಾಜ್ಯದಲ್ಲಿ 1.89ಕೋಟಿ ಅಸಂಘಟಿತ ಕಾರ್ಮಿಕರಿದ್ದು, 75ಲಕ್ಷ ಕಾರ್ಮಿಕರು ಮಾತ್ರ ನೋಂದಣಿಯಾಗಿದ್ದಾರೆ. ಟೈಲರ್ಸ್‌ ಕುಟುಂಬದವರು ಇ-ಶ್ರಮ್ ಕಾರ್ಡ್ ಸೇರಿ ನಾನಾ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಕಟ್ಟಡ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಎಲ್ಲರ ಬೆಂಬಲಬೇಕು ಎಂದರು.

ಕೆಎಸ್‌ಟಿಎ ವಲಯ ಅಧ್ಯಕ್ಷ ಕೆ.ರಾಜೇಶ್, ಪದಾಧಿಕಾರಿಗಳಾದ ಕೆ.ಸಿದ್ದಪ್ಪ, ಬಿ.ದಾದಾಪೀರ್, ಎಂ.ಜಡೆಯ್ಯ, ಎಸ್.ರಾಮು, ಪ್ರಮುಖರಾದ ರಾಜು ನಾಯಕ್, ಸಿ.ಆರ್.ಹನುಮಂತ, ವೀರಾಂಜನೇಯಲು, ಹಬೀಬ್‌ರೆಹಮಾನ್, ಬಳೆ ಮಲ್ಲಿಕಾರ್ಜುನ, ಹಿರಿಯ ಟೈಲರ್ಸ್‌ಗಳಾದ ಬಾಷಸಾಬ್, ಬಸವರಾಜ್, ಚನ್ನಪ್ಪ, ಖಾಜಾಮೊಹಿದ್ದೀನ್, ಮಾಬುಸಾಬ್, ಗಂಗಾವತಿ ಸೇರಿ ನಾನಾ ಕಡೆಗಳಿಂದ ಆಗಮಿಸಿದ ಟೈಲರ್ಸ್‌ ಕುಟುಂಬದವರು ಪಾಲ್ಗೊಂಡಿದ್ದರು. ಟೈಲರ್‌ಗಳಿಗೆ ಗುರುತಿನಚೀಟಿ ವಿತರಿಸಲಾಯಿತು.


ಇದಕ್ಕೂ ಮುನ್ನ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಟೈಲರ್ಸ್‌ ಮೆರವಣಿಗೆಗೆ ಚಾಲನೆ ನೀಡಿ, ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net