

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನದ ಬಂಗಾರದೊಡ್ಡಿ ನಾಲೆ ಸೇರಿದಂತೆ ತಾಲೂಕಿನ ಬೆಳಗೊಳ ವ್ಯಾಪ್ತಿಯ ಪೂರ್ಣಯ್ಯ ನಾಲೆಯ ಮೂಲ ಪ್ರದೇಶವನ್ನು ಕಾವೇರಿ ನೀರಾವರಿ ನಿಗಮ, ತಾಲೂಕು ಆಡಳಿತ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಅಕ್ರಮ ಒತ್ತುವರಿ ಗುರುತಿಸಿ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಅವರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು.
ಬೆಳಗೊಳ ವ್ಯಾಪ್ತಿಯ ಪೂರ್ಣಯ್ಯ ನಾಲೆ ಹಾಗೂ ಅದರ ಸುತ್ತಮುತ್ತಲ ಪ್ರದೇಶ ಮತ್ತು ಬಂಗಾರದೊಡ್ಡಿ ನಾಲೆ ಸೇರಿದಂತೆ ಕಾವೇರಿ ನದಿಯ ತೀರವನ್ನು ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿರುವ ಕುರಿತು ಸಾಕಷ್ಟು ದೂರು ಹಾಗೂ ಆರೋಪಗಳು ಕೇಳಿ ಬಂದಿದ್ದು, ಇವುಗಳ ಮೂಲ ಸ್ಥಳ ಹಾಗೂ ನಕ್ಷೆ ಗುರುತಿಸುವ ಮೂಲಕ ಅಕ್ರಮ ಒತ್ತುವರಿ ಪರಿಶೀಲಿಸಿ ಮೇಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿಬೇಕು. ಸಂಬಂಧಪಟ್ಟ ಸ್ಥಳದಲ್ಲಿ ಅತಿಕ್ರಮಿಸಿಕೊಂಡಿರುವ ವ್ಯಕ್ತಿಗಳಿಗೆ ತೆರವುಗೊಳಿಸುವಂತೆ ತಕ್ಷಣ ನೋಟಿಸ್ ಜಾರಿಗೊಳಿಸಬೇಕು. ಬಳಿಕ ಸಂಬಂಧಪಟ್ಟ ಇಲಾಖೆ ಅತಿಕ್ರಮಸಿರುವ ಜಾಗ ತೆರವು ಕಾರ್ಯಚರಣೆ ನಡೆಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕ್ಷೇತ್ರದಲ್ಲಿ ಮನೆ ಕಳೆದುಕೊಂಡಿರುವ ಕುಟುಂಬಗಳನ್ನು ಅಗತ್ಯವಾಗಿ ಪಟ್ಟಿ ಮಾಡಬೇಕು. ಅಂತಹ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯಗಳು ತಕ್ಷಣ ದೊರಕುವಂತೆ ಹಾಗೂ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿ ನಷ್ಟ ಉಂಟಾಗಿರುವ ರೈತರ ಮಾಹಿತಿ ಸಂಗ್ರಹಿಸಿ ಅವರಿಗೆ ಸೂಕ್ತ ಪರಿಹಾರ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪೌರನೌಕರರ ಪ್ರತಿಭಟನೆಯಿಂದ ಕಸ ಮತ್ತು ತ್ಯಾಜ್ಯಗಳು ಎಲ್ಲೆಂದರಲ್ಲಿ ಸಂಗ್ರಹವಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುವ ಮೊದಲೇ ಖಾಸಗಿ ನೌಕರರಿಂದ ಹಣ ಪಾವತಿ ಮಾಡಿಸಿ ತೆರವುಗೊಳಿಸಲು ಕ್ರಮವಹಿಸಬೇಕು ಎಂದರು.
ಕಾವೇರಿ ನೀರಾವರಿ ನಿಗಮದ ಕೆಆರ್‌ಎಸ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಬು, ಕಿಶೋರ್ ಕುಮಾರ್, ಜಯರಾಮ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೇಣು, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಸೆಸ್ಕ್ ಎಇ ಪ್ರದೀಪ್ ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.