

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದು ರಥದ ಎರಡು ಚಕ್ರಗಳಂತೆ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ರಾಜಕೀಯ ಮಾಡದೆ ಜನಪ್ರತಿನಿಧಿಗಳಿಗಾಗಿ ಕಾಯದೆ ಜನರ ಸಮಸ್ಯೆಗೆ ಸ್ಪಂದಿಸಿ ಅವರ ಆಶೋತ್ತರ ಈಡೇರಿಸಬೇಕು ಎಂದು ಶಾಸಕ ರಾಜೇಶ್ ನಾಕ್ ಹೇಳಿದರು.
ಬಿ.ಸಿ.ರೋಡ್ನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬುಧವಾರ ಜಿಲ್ಲಾಮಟ್ಟದ ಜನತಾದರ್ಶನ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಜನತಾ ದರ್ಶನದಲ್ಲಿ ಅಚ್ಚರಿ ಎಂಬಂತೆ ಕ್ಷೇತ್ರದ ನೂರಾರು ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿರುವುದು ಅತೀವ ಸಂತಸ ತಂದಿದೆ. ಕೆಲವರಿಗೆ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅಶ್ಚರ್ಯವಾಗಿರಬಹುದು. ನಾನು ಇಡೀ ಬಂಟ್ವಾಳ ಕ್ಷೇತ್ರದ ಜನರ ಶಾಸಕನೇ ಹೊರತು, ಒಂದು ಪಕ್ಷಕ್ಕೆ ಸೀಮಿತ ಶಾಸಕನಲ್ಲ. 2013ರಲ್ಲಿ ಶುಲ್ಕ ಪಾವತಿಸಿ ಹಕ್ಕುಪತ್ರಕ್ಕಾಗಿ ಕಾದುಕುಳಿತಿರುವ ಫಲಾನುಭವಿಗಳು ಮತ್ತು ಹಕ್ಕುಪತ್ರಕ್ಕಾಗಿ ಕಣ್ಣೀರಿಡುತ್ತಿದ್ದ ಎರಡು ಕುಟುಂಬಗಳಿಗೆ ಜನತಾ ದರ್ಶನದಲ್ಲಾದರೂ ಹಕ್ಕುಪತ್ರ ನೀಡಲಾಗುತ್ತಿದೆ ಎಂಬ ಸಂತಸದ ಕ್ಷಣಕ್ಕಾಗಿ ಕಾಯುತ್ತಿದ್ದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ನಡೆಯುವ ಸಮಿತಿ ಸಭೆಗೂ ಗೈರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಎಸ್ಪಿ ಯತೀಶ್ ಎನ್., ಡಿಸಿಎಫ್ ಅಂಥೋಣಿ ಮರಿಯಪ್ಪ, ತಹಸೀಲ್ದಾರ್ ಅರ್ಚನಾ ಡಿ.ಭಟ್, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಉಪಾಧ್ಯಕ್ಷ ಮೋನೀಶ್ ಆಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಪಂಚ ಗ್ಯಾರಂಟಿ ಯೋಜನೆ ಬಂಟ್ಚಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಮತ್ತಿತರರಿದ್ದರು.
ಸೇತುವೆಗೆ ಬೇಡಿಕೆ:
ಪಾಣೆಮಂಗಳೂರು ಸೇತುವೆ ಶಿಥಿಲಗೊಂಡು ಸಂಚಾರ ದುಸ್ತರವಾಗಿದೆ. ಹಾಗಾಗಿ ನೂತನ ಸೇತುವೆ ನಿರ್ಮಾಣಕ್ಕಾಗಿ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ನೀಡಲಾಯಿತು. ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಪುರಸಭೆ ಉಪಾಧ್ಯಕ್ಷ ಮೂನೀಶ್ ಅಲಿ, ಬಂಟ್ವಾಳ ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ, ಸಂಶಾದ್ ಗೂಡಿನಬಳಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ ಉಪಸ್ಥಿತರಿದ್ದರು.
ರುದ್ರಭೂಮಿ ನಿರ್ಮಾಣಕ್ಕೆ ಮನವಿ
ಸಜಿಪಮುನ್ನೂರು ಗ್ರಾಮದಲ್ಲಿ 30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಯಾದ ಹಿಂದು ರುದ್ರಭೂಮಿ ನಿರ್ಮಿಸಿ ಕೊಡುವಂತೆ, ನಂದಾವರ-ಮಂಜಲ್ಪಾದೆ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಸೌಕರ್ಯ ಪುನರಾರಂಭಿಸುವಂತೆ ಒತ್ತಾಯಿಸಲಾಯಿತು.
ಚುನಾಯಿತ ಪ್ರತಿನಿಧಿಗಳಿಗಿಲ್ಲ ಮಾಹಿತಿ
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಅಧಿಕಾರಿಗಳು ಸೌಜನ್ಯಕ್ಕಾದರೂ ಚುನಾಯಿತ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಕೊನೇ ಕ್ಷಣದಲ್ಲಿ ಈ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಗೈರಾದರೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.