

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ 15 ದಿನಗಳಿಂದ ಸುರಿದ ಭಾರಿ ಮಳೆಗೆ ತತ್ತರಿಸಿದ ಗ್ರಾಮಗಳಿಗೆ ಶಾಸಕ ಡಿ.ರವಿಶಂಕರ್ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದ ಹಾನಿಗೀಡಾದ ರೈತರ ಜಮೀನು ಕಂಡು ಮರುಕ ವ್ಯಕ್ತಪಡಿಸಿದ ಶಾಸಕರು, ರೈತರಿಗೆ ಸಾಂತ್ವನ ಹೇಳಿ, ಶೀಘ್ರದಲ್ಲೇ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿದ್ದ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿಗೆ ಸೂಚನೆ ನೀಡಿದರು.
ಹಿಂದೆ ಕೆರೆ, ಕಾಲುವೆ, ಕಟ್ಟೆಗಳನ್ನು ಆಗಿನ ಕಾಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಭತ್ತದ ನಾಡು ತಾಲೂಕಿಗೆ ಬಹಳ ವರ್ಷಗಳಿಂದ ಕೆರೆ ಕಟ್ಟೆಗಳಲ್ಲಿ ಹೂಳು ತುಂಬಿದ್ದು, ದುರಸ್ತಿ ಕಂಡಿಲ್ಲದ್ದರಿಂದ ಸಮಸ್ಯೆಗಳು ಎದುರಾಗಿವೆ. ಭಾರಿ ಮಳೆ ಬಿದ್ದಿದ್ದರಿಂದ ಮನೆಗಳಿಗೆ ನೀರು ನುಗ್ಗಿ ಅವಘಡಗಳು ಹೆಚ್ಚಾಗಿವೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಜತೆ ಭೇಟಿ ಮಾಡಿ, ಅಂದಾಜು ವೆಚ್ಚ ತಯಾರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಕೆ.ಆರ್.ನಗರ ತಾಲೂಕಿನಲ್ಲಿ 27 ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ 28 ಮನೆಗಳು ಹಾನಿಗೀಡಾಗಿದ್ದು, ಸರ್ಕಾರದ ಸುತ್ತೋಲೆಯಂತೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಶಾಸಕರು, ಸಂಪೂರ್ಣವಾಗಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಪಂ ಇಒ ಕುಲದೀಪ್, ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಹಾರಂಗಿ ನೀರಾವರಿ ನಿಗಮದ ಇಇ ಕುಶುಕುಮಾರ್, ಎಇಇಗಳಾದ ಅಯಾಜ್ ಪಾಷ, ರಾಜೇಂದ್ರ, ಜೆಇ ಕಿರಣ್, ಜಿಪಂ ಜೆಇ ರವಿಕುಮಾರ್, ಹಂಪಾಪುರ ಗ್ರಾಪಂ ಅಧ್ಯಕ್ಷೆ ವಿದ್ಯಾನಾರಾಯಣ್, ಪಿಡಿಒ ಅಶ್ವಿನಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ಕಾಂಗ್ರೆಸ್ ತಾಲೂಕು ವಕ್ತಾರ ಸೈಯದ್ ಜಾಬೀರ್, ಟಿಎಪಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ.ರವಿ ಇದ್ದರು.