

ಕೊಳ್ಳೇಗಾಲ : ಪಟ್ಟಣದ 23ನೇ ವಾರ್ಡ್ ವ್ಯಾಪ್ತಿಯ ನೂರ್ ಮೊಹಲ್ಲಾ ಬಡಾವಣೆಯ ಕೆಲವು ನಿವಾಸಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಹಿನ್ನೆಲೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಬಡಾವಣೆಗೆ ಭೇಟಿ ನೀಡಿ, ಜನರಿಂದ ಮಾಹಿತಿ ಪಡೆದರು.
ಈ ಸಂಧರ್ಭದಲ್ಲಿ ಚಾ.ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಿದಂಬರಂ, ತಾಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್, ನಗರಸಭೆ ಪೌರಯುಕ್ತ ರಮೇಶ್, ನಗರಸಭೆ ಅಧ್ಯಕ್ಷ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ವಾರ್ಡ್ ಸದಸ್ಯ ಜಯಮರಿ ಸೇರಿದಂತೆ ಇತರ ಸದಸ್ಯ ರುಗಳೊಂದಿಗೆ ವಾರ್ಡ್ ಗೆ ತೆರಳಿ ಅಲ್ಲಿನ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲಿಸಿದರು.
ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನೂರ್ ಮೊಹಲ್ಲಾದ ವಾರ್ಡ್‌ನ ಒಂದನೇ ಕ್ರಾಸ್‌ನ ನಿವಾಸಿಗಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಈ ಸಮಸ್ಯೆ ಇಡೀ ಬಡಾವಣೆಯಲ್ಲಿಲ್ಲ. ಹಳೇಯ ಬೋರ್‌ವೆಲ್ ನೀರಿನಿಂದ ಸಮಸ್ಯೆ ಸಂಭವಿಸಿಲ್ಲ. 24*7 ಕುಡಿ ಯುವ ನೀರನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.
ಕಾರಣ ಏನೆಂಬುದು ವೈದ್ಯಾಧಿಕಾರಿಗಳು ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ. ನಮ್ಮ ಪರಿಶೀಲನೆ ವೇಳೆ ನೀರಿನಿಂದ ಈ ಸಮಸ್ಯೆ ಆಗಲ್ಲ. ಬಡಾವಣೆಯಲ್ಲಿ ಸ್ವಚ್ಛತೆ ಕೊರತೆ ಕಂಡು ಬರುತ್ತಿದೆ. ನಗರಸಭೆಯವರು ಈ ಬಗ್ಗೆ ಗಮನಹರಿಸಿ ಸ್ವಚ್ಛತೆ ಮಾಡುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೂ ಆಸ್ಪತ್ರೆಗೆ ದಾಖಲಾಗಿರುವ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಅಪಾಯವಿಲ್ಲ ಎಂದರು.
ಈ ವೇಳೆ ಬಡಾವಣೆ ಜನರಿಗೆ ಅಧಿಕಾರಿಗಳ ಜತೆ ಸೇರಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಸ್ಥಳದಲ್ಲಿದ್ದ ವಾರ್ಡ್ ಸದಸ್ಯೆ ಜಯಮೇರಿ ಅವರಿಗೂ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ ಇತರರು ಇದ್ದುರು.