ಕೈಗಾರಿಕಾ ಜಮೀನು ಅತಿಕ್ರಮಣ ತೆರವುಗೊಳಿಸಿ

Devadurga Industrial Workers Appeal
ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಆಪ್ತಸಹಾಯಕ ರಾಜೇಶಗೆ ದೇವದುರ್ಗ ಕೈಗಾರಿಕೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
Published on

ದೇವದುರ್ಗ: ಪಟ್ಟಣ ಹೊರವಲಯದಲ್ಲಿ ಸ್ವಾಧೀನ ಪಡಿಸಿಕೊಂಡ 29.31ಎಕರೆ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕೆಂದು ದೇವದುರ್ಗ ಕೈಗಾರಿಕೆ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ. ಈ ಕುರಿತು ಶಾಸಕಿ ಕರೆಮ್ಮ ಜಿ.ನಾಯಕ ಆಪ್ತ ಸಹಾಯಕ ರಾಜೇಶಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಪಟ್ಟಣ ಸಮೀಪದ ಸರ್ವೇ ನಂಬರ್ 16/1/1, 17/1, 17/2, 17/3, 195/1, 195/2ರಲ್ಲಿ ಒಟ್ಟು 29.31ಎಕರೆ ಜಮೀನನ್ನು 1992ರಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದೆ.

ಜಮೀನು ವಶಕ್ಕೆ ಪಡೆದು 30ವರ್ಷ ಕಳೆದರೂ ಉದ್ದೇಶಿತ ಯೋಜನೆಗೆ ಅಭಿವೃದ್ಧಿ ಪಡಿಸಿಲ್ಲ. ಇದರಿಂದಾಗಿ ಜಮೀನನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡು ವ್ಯವಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸರ್ಕಾರದ ಜಮೀನು ಅನ್ಯರ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಕೊಳ್ಳಬೇಕು. ಉದ್ದೇಶಿತ ಕೈಗಾರಿಕೆಗಳ ಸ್ಥಾಪನೆ ಮಾಡಬೇಕು. ಯೋಜನೆಯಲ್ಲಿರುವಂತೆ ಕೈಗಾರಿಕೆ ಬಡಾವಣೆ ನಿರ್ಮಿಸಬೇಕು. ಮುಳ್ಳಿನ ಜಾಲಿ ತೆರವು ಮಾಡಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net