

ಮಡಿಕೇರಿ: ಹಲವು ಯೋಜನೆಗಳೊಂದಿಗೆ ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುವುದರೊಂದಿಗೆ ಬಿಜೆಪಿ ಸರ್ಕಾರ ಎಲ್ಲ ವರ್ಗದರಿಗೆ ಸ್ಪಂದಿಸಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ‌್ವತೊಕ್ಲು ಗ್ರಾಮದಲ್ಲಿ ಶಾಸಕರ ನಿಧಿಯಿಂದ ಪೂಜಾರೀರ ಕುಟುಂಬದ ಐನ್‌ಮನೆಗೆ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ, ಐನ್‌ಮನೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
ಅತಿವೃಷ್ಟಿ, ಪ್ರಕೃತಿ ವಿಕೋಪ, ಕೋವಿಡ್‌ನಂತಹ ಸಂಕಷ್ಟದ ಕಾಲದಲ್ಲಿಯೂ ಕೂಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಗೆ ಅನುದಾನ ಬಂದಿದೆ. ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಸೌಲಭ್ಯಗಳಿಗೆ ಕೊರತೆ ಮಾಡಿಲ್ಲ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ನೀಡಲಾಗುತ್ತಿದೆ. ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೆ ಈಗಾಗಲೇ ೧೧೪ ಕೋಟಿ ಬಿಡುಗಡೆಯಾಗಿದ್ದು, ೫೨ಸಾವಿರ ಮಂದಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಜಲಜೀವನ್ ಮಿಷನ್‌ನಡಿ ಜಿಲ್ಲೆಗೆ ೩೫೦ಕೋಟಿ ಬಿಡುಗಡೆಯಾಗಿದ್ದು, ಪ್ರತಿ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಮನೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ೭೦೦ ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ. ಹತ್ತು ಎಚ್‌ಪಿ ಒಳಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ನಿರ್ಧಾರ ತಳೆಯಲಾಗಿದ್ದು, ಸ್ವಲ್ಪ ಗೊಂದಲದಲ್ಲಿದೆ. ಅದನ್ನು ಸರಿಪಡಿಸಿ ಕಲ್ಪಿಸಲಾಗುವುದು. ಸರ್ಕಾರ ಎಲ್ಲ ರೀತಿಯಲ್ಲೂ ಸ್ಪಂದಿಸುತ್ತಿದ್ದು, ಸದುಪಯೋಗಪಡಿಸಿಕೊಳ್ಳವುದು ನಮ್ಮ ಕೈಯ್ಯಲಿದೆ ಎಂದು ಹೇಳಿದರು.
ಐನ್‌ಮನೆಗಳು ನಮ್ಮ ಸಂಸ್ಕೃತಿ ಹಾಗೂ ಪದ್ಧತಿಯ ಪ್ರತೀಕವಾಗಿದೆ. ಎಲ್ಲ ಸಂಸ್ಕೃತಿ ಒಂದೇ ಆಗಿದ್ದು, ಪ್ರಸ್ತುತ ನಾಶವಾಗುತ್ತಿದೆ. ಅವುಗಳನ್ನು ಉಳಿಸುವ ಕೆಲಸವಾಗಬೇಕು. ಐನ್‌ಮನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕರು ಹೇಳಿದರು.
ಭಾರತೀಯ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‌ಕುಮಾರ್ ಮಾತನಾಡಿ, ಬೆಟ್ಟಗೇರಿ ಪಂಚಾಯಿತಿ ಹಾಗೂ ಅರ‌್ವತ್ತೊಕ್ಲು ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೂ ಕೆಲವರುಎ ಟೀಕೆ ಮಾಡುತ್ತಾರೆ. ಅದಕ್ಕೆ ಉತ್ತರ ಕೊಡಲು ಹೋಗುವುದಿಲ್ಲ. ಈಗಾಗಲೇ ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ.೧.೬೫ ಕೋಟಿ ಮೊತ್ತದ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು, ಮಳೆಯಿಂದಾಗಿ ಕೆಲಸ ವಿಳಂಬವಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೂಜಾರಿರ ಕುಟುಂಬದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಬೋಪಯ್ಯರವರನ್ನು ಸನ್ಮಾನಿಸಲಾಯಿತು. ಪೂಜಾರಿರ ಕುಟುಂಬದ ಹಿರಿಯರಾದ ಮಾದಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ‌್ಯಾಲಿ ಮಾದಯ್ಯ, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯ ತಳೂರು ದಿನೇಶ್‌ಕುಮಾರ್, ಮಾಜಿ ಸದಸ್ಯ ಕಡ್ಯದ ವಿಜಯ, ತಾ.ಪಂ. ಮಾಜಿ ಸದಸ್ಯೆ ತುಂತಜೆ ಕುಮುದ ರಶ್ಮಿ, ಜಿಲ್ಲಾ ಕೃಷಿ ಮೋರ್ಚಾ ಉಪಾಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಕೆಲವರು ಶಾಸಕರುಗಳು ಏನೇನೂ ಕೆಲಸ ಮಾಡಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ. ಟೀಕೆ, ಅವಮಾನಿಸುವುದು ಸಾಮಾನ್ಯ. ನಮಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಜನರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಏನೂ ಕೆಲಸ ಮಾಡದಿದ್ದರೆ ಜನರು ನಮ್ಮನ್ನು ಗೆಲ್ಲಿಸುತ್ತಿರಲಿಲ್ಲ. ಎರಡು ವರ್ಷ ರಾಜ್ಯದದ ೨೫ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆಯಾಗಿದೆ. ೨೦೧೮-೧೯ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದೆ. ನಂತರ ಕೋವಿಡ್ ಮಹಾಮಾರಿಯಿಂದಾಗಿ ಲಾಕ್‌ಡೌನ್ ಆಗಿ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ಅಭಿವೃದ್ಧಿ ಕೆಲಸಗಳು ನಿಂತು ಹೋಗಿದ್ದವು.
ಕೆ.ಜಿ.ಬೋಪಯ್ಯ, ಶಾಸಕರು