

ಬೆಳಗಾವಿ: ರಾಜಕೀಯ ಒತ್ತಡಕ್ಕೆ ಮಣಿದು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿರುವ ಪ್ರಾದೇಶಿಕ ಆಯುಕ್ತರ ವಿರುದ್ಧ ಕಾನೂನು ಹೋರಾಟದ ಜತೆಗೆ ರಾಜ್ಯಪಾಲ, ಕೇಂದ್ರ ಗೃಹ ಇಲಾಖೆಗೆ ದೂರು ಸಲ್ಲಿಸುತ್ತಿದ್ದೇವೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಸವೇಶ್ವರ ವೃತ್ತದಲ್ಲಿರುವ ತಿನಿಸು ಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆ 2020ರಲ್ಲಿ ನಡೆದಿತ್ತು. ಪಾಲಿಕೆ ಸದಸ್ಯರಾಗುವ ಮುನ್ನವೇ ಜಯಂತ ಜಾಧವ ತಮ್ಮ ಪತ್ನಿ ಸೋನಾಲಿ ಜಾಧವ ಮತ್ತು ಮಂಗೇಶ ಪವಾರ ತಮ್ಮ ಪತ್ನಿ ನೀತಾ ಪವಾರ ಹೆಸರಿನಲ್ಲಿ ಮಳಿಗೆಗಳನ್ನು ಪಡೆದುಕೊಂಡಿದ್ದಾರೆ. ಇದೀಗ ರಾಜಕೀಯ ಒತ್ತಡಕ್ಕೆ ಮಣಿದು ಪ್ರಾದೇಶಿಕ ಆಯುಕ್ತರು ಕಾನೂನು ಬಾಹಿರವಾಗಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದಾರೆ ಎಂದು ದೂರಿದರು.
ಲೋಕೋಪಯೋಗಿ ಇಲಾಖೆಯು ಮಳಿಗೆಗಳನ್ನು ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಅಲ್ಲದೆ, ಎಲ್ಲ ಪ್ರಕ್ರಿಯೇಗಳಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು, ಅಧಿಕಾರಿಗಳು ಭಾಗವಹಿಸಿದ್ದಾರೆ. ಇದೀಗ ಅದೇ ಇಲಾಖೆ ಇಂಜಿನಿಯರ್‌ಗಳು ತನಿಖೆ ನಡೆಸುತ್ತಿರುವ ಉದ್ದೇಶ ಏನೂ ಎಂಬುದು ಗೊತ್ತಾಗುತ್ತಿಲ್ಲ. ಜನರಿಂದ ನೇರವಾಗಿ ಆಯ್ಕೆಗೊಂಡಿರುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಅಧಿಕಾರ ಪ್ರಾದೇಶಿಕ ಆಯುಕ್ತರಿಗೆ ಇಲ್ಲ. ಸರ್ಕಾರದ ಇಂತಹ ನಿರ್ಣಯಗಳಿಗೆ ಬಿಜೆಪಿ ಹೆದರುವ ಮಾತೆಯೇ ಇಲ್ಲ. ಪ್ರಾದೇಶಿಕ ಆಯುಕ್ತರಿಗೆ ತಕ್ಕ ಪಾಠ ಕಲಿಸುತ್ತೇವೆ. ಮುಂಬರುವ ಯಾವುದೇ ಅಧಿಕಾರಿಗಳು ಇಂತಹ ಕೆಲಸಕ್ಕೆ ಕೈಹಾಕಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿನಿಸುಕಟ್ಟೆ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಪ್ರಾದೇಶಿಕ ಆಯುಕ್ತರು ಪಾಲಿಕೆಯಲ್ಲಿ ಕೈಗೊಂಡಿರುವ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿ ಗುರಿಯಾಗಿಸಿಕೊಂಡು ಅಧಿಕಾರಿಗಳು ಕೆಲಸ ಮಾಡುವ ಪ್ರವೃತ್ತಿಯನ್ನು ನಿಲ್ಲಿಸಬೇಕು. ಯಾರದು ಮಾತು ಕೇಳಿಕೊಂಡು ಸದಸ್ಯರನ್ನು ಹೆದರಿಸುವ ಕೆಲಸ ಮಾಡಬೇಡಿ ಎಂದರು.
.........
ಸದಸ್ಯತ್ವ ರದ್ದತಿಗೆ ಏನೂ ಕಾರಣ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ಲೋಕೋಪಯೋಗಿ ಇಲಾಖೆಯು ನಗರದ ಬಸವೇಶ್ವರ ವೃತ್ತದಲ್ಲಿ 2021ರಲ್ಲಿ ಶಾಸಕರ ಅನುದಾನ, ಸ್ಮಾರ್ಟ್ ಸಿಟಿ ಯೋಜನೆಯಡಿ ರಾಣಿ ಚೆನ್ನಭೈರಾದೇವಿ ಹೆಸರಲ್ಲಿ ಸುಸಜ್ಜಿತ 40 ತಿನಿಸು ಕಟ್ಟೆ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿತ್ತು. ಈ ವೇಳೆ ಪಾಲಿಕೆ ಸದಸ್ಯ ಜಯಂತ ಜಾಧವ ತಮ್ಮ ಪತ್ನಿ ಸೋನಾಲಿ ಜಾಧವ ಮತ್ತು ಮಂಗೇಶ ಪವಾರ ತಮ್ಮ ಪತ್ನಿ ನೀತಾ ಪವಾರ ಹೆಸರಿನಲ್ಲಿ ಪಾಲಿಕೆ ಸದಸ್ಯರಾಗುವ ಮುನ್ನವೇ ಮಳಿಗೆ ಪಡೆದುಕೊಂಡಿದ್ದರು. ಆದರೆ, ಸದಸ್ಯರಾಗಿ ಆಯ್ಕೆಯಾದ ಬಳಿಕ ಮಳಿಗೆಗಳನ್ನು ವಾಪಸ್ ನೀಡಿರಲಿಲ್ಲ. ಪಾಳಿಕೆಯಿಂದ ಲಾಭ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಸಲ್ಲಿಸಿದ ದೂರಿನ ಆಧಾರದ ಮೇಲೆ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಆದೇಶ ಹೊರಡಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
...........