ಬಾಣಂತಿಯರ ಸಾವಿಗೆ ಭ್ರಷ್ಟಾಚಾರ, ಕಳಪೆ ಔಷಧ ಕಾರಣ

IMG-20250106-WA0018.jpg
Published on

-ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಶಾಸಕ ಡಾ. ಚಂದ್ರ ಲಮಾಣಿ ದೂರು

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ರಾಜ್ಯಾದಾದ್ಯಂತ ಬಾಣಂತಿಯರ, ನವಜಾತ ಶಿಶುಗಳ ಸಾವಿಗೆ ಕಳಪೆ ಔಷಧ, ವೈದ್ಯಕೀಯ ಸಾಮಗ್ರಿಗಳ ಪೂರೈಕೆ , ಭ್ರಷ್ಟಾಚಾರ ಹಾಗೂ ವೈದ್ಯರ ಕೊರತೆಯೇ ಕಾರಣ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ, ಶಾಸಕ ಡಾ. ಚಂದ್ರ ಲಮಾಣಿ ದೂರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ನಿರ್ಲಕ್ಷೃದಿಂದಾಗಿ ಉಂಟಾಗುತ್ತಿರುವ ಬಾಣಂತಿಯರ, ಶಶಿಗಳು ಸರಣಿ ಸಾವಿನ ಹಿನ್ನೆಲೆ ಬಿಜೆಪಿಯ ಎರಡು ಸತ್ಯಶೋಧನಾ ಸಮಿತಿಗಳು ಕಲ್ಯಾಣ ಮತ್ತು ಉತ್ತರ ಕರ್ನಾಟ ಭಾಗದಲ್ಲಿ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾಣಂತಿಯರ, 1100 ಹೆಚ್ಚು ನವಜಾತ ಶಿಶುಗಳ ಮೃತಪಟ್ಟಿವೆ ಎಂದು ವಾಗ್ದಾಳಿ ನಡೆಸಿದರು.

ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ವರದಿ ಪ್ರಕಾರ ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧಿಗಳು. (ರಿಂಗರ್ ಲ್ಯಾಕ್ವೆಟ್ ದ್ರಾವಣ),ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಕಾರಣವಾಗಿದ ಎಂದು ದೂರಿದರು.

ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷಿತ ಮಾತ್ರತ್ವ ಅಭಿಯಾನ, ಸುರಕ್ಷಿತ್ ಮಾತ್ರತ್ವ ಆಶ್ವಾಸನ, ಲಕ್ಷ, ಪ್ರಧಾನ ಮಂತ್ರಿ ಮಾತೃವಂದನ ಯೋಜನೆ, ಅನಿಮಿಯ ಮುಕ್ತ ಭಾರತ, ಮದರ್ ಅಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್. ಪೋಶಣ ಅಭಿಯಾನ, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಾಣಂತಿ ಮತ್ತು ಶಶಿಗಳ ಸಾವಿನ ಸತ್ಯ ಹೊರ ಬರಲು ಮತ್ತು ಸಾವು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು.ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಕೂಡಲೇ ಸರ್ಕಾರ ನಿಯಮವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಡಾ.ಸೋನಾಲಿ ಸರ್ನೋಬತ್, ಡಾ.ವಿಜಯಲಕ್ಷ್ಮೀ ತುಂಗಳ, ಡಾ.ಶೋಭಾ ನಿಸ್ಸಿಮಗೌಡರ, ಶಿಲ್ಪಾ ಖೆಕರೆ, ಶಾಂಭವಿ ಅಶ್ವತಪುರ, ಮಂಜುನಾಥ ಪಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net