

ಬೆಳಗಾವಿ: ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಜ.20 ರಿಂದ 23ರವರೆಗೆ ಆದಿತ್ಯ ಮಿಲ್ಕ್ ‘ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ’-24 ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ನಗರದ ಮಾಲಿನಿ ಸಿಟಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಳಗಾವಿ ವಾಣಿಜ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಲು ಈ ಉತ್ಸವ ಸಹಕಾರಿಯಾಗಿದೆ. ಅಲ್ಲದೆ, ಯುವ ಸಮೂಹ ಹಾಗೂ ಮಕ್ಕಳು ತಮ್ಮ ಕಲೆ, ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಎಂದರು.
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಇಂಡೋನೇಷ್ಯಾ, ನೆದರರ್ಲೆಂಡ್, ಯುಕೆ ಸೇರಿ ವಿವಿಧ ದೇಶಗಳಿಂದ ಹತ್ತು ಜನರು ಹಾಗೂ ದೇಶದ ವಿವಿಧ ರಾಜ್ಯಗಳಿಂದ 32ಕ್ಕೂ ಅಧಿಕ ಗಾಳಿಪರ ಹಾರಿಸುವ ಪರಿಣಿತರು ಆಗಮಿಸಲಿದ್ದಾರೆ. ಈ ಉತ್ಸವದಲ್ಲಿ ಭಾಷಣ, ಸೋಲೋ ನೃತ್ಯ, ಗುಂಪು ನೃತ್ಯ, ಸೋಲೊ ಗಾಯನ, ಮೋಕ್‌ಪ್ರೇಸ್ ಹಾಗೂ ಪ್ಯಾಷನ್ ಶೋ ಸ್ಪರ್ಧೆಗಳು ಆಯೋಜಿಸಲಾಗಿದೆ. ಈ ಬಾರಿಯು ಕಾಲೇಜು ವಿದ್ಯಾರ್ಥಿಗಳಿಗೆ ಡಿಜೆ ಕಾರ್ಯಕ್ರಮವನ್ನು ಜ.20ರಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಪ್ರತಿ ವರ್ಷ ಗಾಳಿಪಟ ಉತ್ಸವದ ಕೊನೆಯದಿನದಂದು ಕ್ರಾೃಕರ್ ಶೋ ನಡೆಸಲಾಗುತಿತ್ತು. ಈ ಬಾರಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ನಿಮಿತ್ತ ಜ.22ರಂದು ಭವ್ಯ ಕ್ರಾೃಕರ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜತೆಗೆ ಬಲೂನ್ ಪ್ರದರ್ಶನ ಕೂಡ ನಡೆಯಲಿದೆ. ಅವತ್ತು ಶ್ರೀರಾಮ ಭಾವಚಿತ್ರಗಳನ್ನು ಒಳಗೊಂಡಿರುವ ಗಾಳಿಪಟಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕಾರದಲ್ಲಿ ಹಾರಾಡಲಿವೆ ಎಂದು ತಿಳಿಸಿದರು.