

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಠಿಕರಣ ನೀತಿಯಿಂದಾಗಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮತ್ತೊಂದೆಡೆ ಹಲ್ಲೆಕೋರರು, ದುಷ್ಕರ್ಮಿಗಳ ರಕ್ಷಿಸಿ ಪ್ರೋತ್ಸಾಹಿಸುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧ, ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
2022ರಲ್ಲಿ ಹುಬ್ಬಳ್ಳಿ ಪೊಲೀಸ್ ಠಾಣೆ, ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಮುಸ್ಲಿಂ ದುಷ್ಕರ್ಮಿಗಳನ್ನು ಬಿಜೆಪಿ ಸರ್ಕಾರ ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಿತು.ಆದರೆ, 2023ರಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ದುಷ್ಕರ್ಮಿಗಳ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದುಕೊಂಡಿತು. ಇದೀಗ ಏನೂ ಕೃತ್ಯ ಎಸಗಿದರು ನಮ್ಮ ಕಾಂಗ್ರೆಸ್ ರಕ್ಷಿಸುತ್ತದೆ ಎಂಬ ವಾತಾವರಣ ಸೃಷ್ಟಿಸಿದ್ದರಿಂದ ಕಾನೂನು ಬಾಹಿರ ಚಟುವಟಿಕೆ, ಅಶಾಂತಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಡಲ, ಶಿವಮೊಗ್ಗ ಜಿಲ್ಲೆಗಳಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಅನ್ಯ ಕೋಮಿನವರ ಕಲ್ಲು ತೂರಾಟ ನಡೆಸಿದ್ದಾರೆ. ಹಿಂದೂ ಧಾರ್ಮಿಕ ಆಚರಣೆಗಳಿಗೆ ಪದೇ ಪದೇ ಅಡ್ಡಿ ಪಡಿಸುವ ಕೆಲಸಗಳು ನಡೆಯುತ್ತಿವೆ. ಈ ಎಲ್ಲ ಘಟನೆಗಳಿಗೆ ಸರ್ಕಾರವೇ ನೆರೆ ಹೊಣೆಯಾಗಿದೆ. ಗೃಹ ಸಚಿವರ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಸಚಿವರು, ಶಾಸಕರು ಪರೋಕ್ಷವಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಯಾವುದೇ ಮಾನದಂಡಗಳು ಇಲ್ಲದೆ ಮುಸ್ಲಿಮರನ್ನು ಒಬಿಸಿ ಎಂದು ವರ್ಗೀಕರಿಸುವ ಮೂಲಕ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಕಾಂಗ್ರೆಸ್ ಜನಗಣತಿಯನ್ನು ಮುಸ್ಲಿಂ ಸಮಾಧಾನಕ್ಕಾಗಿ ಬಳಸುತ್ತಿದೆ. ಮೀಸಲಾತಿಯನ್ನು ಮೀರಿದ ನೀತಿಗಳಿಗೆ ಡೇಟಾವನ್ನು ಒತ್ತಿಹೇಳುತ್ತಿದೆ. ಲಿಂಗಾಯತ ಸಮಾಜದಲ್ಲಿ ಕ್ರೈಸ್ತ್ ಎಂಬ ಸೇರ್ಪಡೆ ಮಾಡಿದ್ದು, ಕೂಡಲೇ ಕೈ ಬಿಡಬೇಕು. ಸರ್ಕಾರವು ಪರೋಕ್ಷವಾಗಿ ಮತಾಂತರಕ್ಕೆ ಪ್ರೋತ್ಸಾಹಿಸುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ, ರಾಜಶೇಖರ ಡೋಣಿ, ಮುರೇಂದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಇತರರಿದ್ದರು.