ಶಾಸಕ ವಿಶ್ವಾಸ ವೈದ್ಯ, ವಿರೂಪಾಕ್ಷ ಮಾಮನಿ ಅವಿರೋಧ ಆಯ್ಕೆ ನಿಶ್ಚಿತ; ಜಾರಕಿಹೊಳಿ ವಿಶ್ವಾಸ

IMG-20250906-WA0045.jpg
Published on

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಯರಗಟ್ಟಿ ತಾಲೂಕಿನಿಂದ ಶಾಸಕ ವಿಶ್ವಾಸ ವೈದ್ಯ ಅವರು ಒಮ್ಮತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ‌ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು.

ಯರಗಟ್ಟಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯರಗಟ್ಟಿ ಭಾಗದ ಪ್ರಮುಖರ ಆಕಾಂಕ್ಷಿ ಅಜೀತ ದೇಸಾಯಿ ಹಾಗೂ ಶಾಸಕ ವಿಶ್ವಾಸ ವೈದ್ಯ ಬೆಂಬಲಿತ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ನಮ್ಮಗುಂಪಿನ ಅಭ್ಯರ್ಥಿಯಾಗಿದ್ದು, ಇದಕ್ಕೆ ಅಜೀತ ದೇಸಾಯಿಯವರು ಸಂಪೂರ್ಣ ಸಹಮತ ಸೂಚಿಸಿದ್ದಾರೆ ಎಂದು ಹೇಳಿದರು.

ಸವದತ್ತಿ ಕ್ಷೇತ್ರದಿಂದ ವಿರೂಪಾಕ್ಷ ಮಾಮನಿ ಅವರು ನಮ್ಮ ಅಭ್ಯರ್ಥಿ ಎಂದು ಅವರು ಘೋಷಿಸಿದರು. ಯರಗಟ್ಟಿ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಎರಡೂ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ನಿಶ್ಚಿತ.ಸಹಕಾರಿ ತತ್ವದಡಿ ನಡೆಯುವ ಈ ಚುನಾವಣೆಯು ಪಕ್ಷಾತೀತವಾಗಿದೆ. ಮುಂದಿನ ದಿನಗಳಲ್ಲಿ ದೇಸಾಯಿ ಅವರಿಗೆ ಯಾವುದೇ ಅನ್ಯಾಯ ಆಗದಂತೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ತಿಳಿಸಿದರು.

ಸವದತ್ತಿ ಶಾಸಕರಿಂದ ಯಾವ ತೊಂದರೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆ ಎಂದು ದೇಸಾಯಿಯವರ ಬೆಂಬಲಿಗರಿಗೆ ವಾಗ್ದಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. 16 ಸ್ಥಾನಗಳಲ್ಲಿ ನಾವು 12 ಸ್ಥಾನಗಳನ್ನು ಗೆಲ್ಲುತ್ತೇವೆ. ಕೆಲವು ಕಡೆಗಳಲ್ಲಿ ಮಾತ್ರ ಚುನಾವಣೆ ನಡೆಯಬಹುದು. ಉಳಿದೆಡೆ ಅವಿರೋಧ ಆಯ್ಕೆಗೆ ಒತ್ತು ಕೊಟ್ಟಿದ್ದು, ಸಮಸ್ಯೆಗಳಿದ್ದ ಕಡೆಗಳಲ್ಲಿ ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ. ಬಹುತೇಕವಾಗಿ ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರು ನಮಗೆ ಬೆಂಬಲವನ್ನು ನೀಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ ಮತ್ತು ಅಣ್ಣಾ ಸಾಹೇಬ ಜೊಲ್ಲೆಯವರು ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆಂದು ಹೇಳಿದರು.

ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಶ್ವನಾಥ ಮಾಮನಿ, ಪ್ರಭು ಪ್ರಭುನವರ, ಸಿ.ಪಿ.ಬಾಳಿ, ಚಂದ್ರು ಜಂಬರಿ, ಶಂಕರ ಇಟ್ನಾಳ, ರಮೇಶ ಅಣ್ಣಿಗೇರಿ, ಪಂಚನಗೌಡ ದ್ಯಾಮನಗೌಡರ, ಸದೆಪ್ಪ ವಾರಿ ಸೇರಿದಂತೆ ಯರಗಟ್ಟಿ- ಸವದತ್ತಿ ಭಾಗದ ಅನೇಕ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net