ವಿವಿ ಸಾಗರ ಜೀವಜಲ ರಕ್ಷಣೆಗೆ ಯೋಜನೆ

dj hyr raitha sangha
Published on

ಹಿರಿಯೂರು: ಬಯಲುಸೀಮೆಯ ಜೀವನಾಡಿ ವಾಣಿ ವಿಲಾಸ ಸಾಗರಕ್ಕೆ ಪ್ರಸಕ್ತ ವರ್ಷ ಭದ್ರಾ ಮೇಲ್ದಂಡೆ-ಎತ್ತಿನಹೊಳೆ ಯೋಜನೆಯಿಂದ ನೀರು ಹರಿಯಲಿದ್ದು, ಸರ್ವ ಋತುವಿನಲ್ಲೂ ಜೀವಜಲ ಕಾಪಿಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲೂಕಿನ ಜೆ.ಜಿ.ಹಳ್ಳಿಯಲ್ಲಿ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ನಿರತ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿ ಮಾತನಾಡಿದರು.

ಬಯಲುಸೀಮೆಯ ಪ್ರಮುಖ ಜಲಪಾತ್ರೆ ವಿವಿ ಸಾಗರ ಜಲಾಶಯ 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯ ಭರ್ತಿಯಾದರೆ, ಕುಡಿವ ನೀರು, ವೇದಾವತಿ ನದಿಯ ಜೀವಂತಿಕೆ, ಕೃಷಿಗೆ ವರದಾನವಾಗಲಿದೆ.

ಎತ್ತಿನಹೊಳೆಯಿಂದ ಪ್ರಾಯೋಗಿಕವಾಗಿ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿದ್ದು, ಭದ್ರೆ-ಎತ್ತಿನಹೊಳೆಯಿಂದ ಹೆಚ್ಚಿನ ಪ್ರಮಾಣದ ನೀರು ತುಂಬಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಜೆ.ಜಿ.ಹಳ್ಳಿ-ಕಲುವಳ್ಳಿ ಭಾಗದ ನೀರಿನ ಸಮಸ್ಯೆ, ರೈತರ ಹೋರಾಟದ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಕೆರೆಗಳಿಗೆ ನೀರು ತುಂಬಿಸಲು ಖಾಸಗಿ ಕಂಪನಿಯಿಂದ ಸರ್ವೇ ಕಾರ್ಯ ಮಾಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಯಾವುದಾದರೂ ಮೂಲದಿಂದ ಗಾಯತ್ರಿ ಜಲಾಶಯಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದರೆ, ಹಿರಿಯೂರು-ಶಿರಾ ತಾಲೂಕಿನ ಗಡಿ ಭಾಗದ ಹತ್ತಾರು ಹಳ್ಳಿ ಜನರಿಗೆ ವರದಾನವಾಗಲಿದೆ ಎಂದು ತಿಳಿಸಿದರು.

ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ. ಕುಡಿವ ನೀರಿನ ಸಂಕಷ್ಟ ಪರಿಸ್ಥಿತಿ ಕುರಿತು ಶೀಘ್ರ ನೀರಾವರಿ ಸಚಿವರ ಗಮನಕ್ಕೆ ತರಲಾಗುವುದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ರೈತರ ವಿರೋಧದಿಂದ ಭದ್ರಾ ಮೇಲ್ದಂಡೆ ಯೋಜನೆ ತುಮಕೂರು ನಾಲೆ ಕಾಮಗಾರಿ ವಿಳಂಬವಾಗಿದೆ. ಯೋಜನೆ ತ್ವರಿತಕ್ಕೆ ಕೇಂದ್ರ ಸರ್ಕಾರ 5300 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು. ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.

ಈ ಸಂಬಂಧ ಕೇಂದ್ರ ನೀರಾವರಿ ಸಚಿವರನ್ನು ಭೇಟಿಯಾಗಿ ಹಣದ ಅಗತ್ಯತೆ ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಜೆ.ಜಿ.ಹಳ್ಳಿ-ಕಲುವಳ್ಳಿ ಭಾಗದಲ್ಲಿ ಅಂತರ್ಜಲ ಪಾತಾಳ ಸೇರಿದ್ದು, ಎಲ್ಲೆಡೆ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡೆಡ್‌ಸ್ಟೋರೇಜ್ ತಲುಪಿರುವ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ತಕ್ಷಣ ಕ್ರಮವಹಿಸಬೇಕು. ಪ್ರತಿ ವರ್ಷ ವಿವಿ ಸಾಗರಕ್ಕೆ ಕನಿಷ್ಠ 10 ಟಿಎಂಸಿ ಅಡಿ ನೀರು ಹರಿಸಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಕಲೀಂ ಸಾಬ್, ಜಯರಾಮಯ್ಯ, ವಜೀರ್ ಸಾಬ್, ಪಾಪಣ್ಣ, ಕೇಶವ, ಬಸವರಾಜಪ್ಪ, ಕೋದಂಡರಾಮಯ್ಯ, ಈರಣ್ಣ, ಶಿವಣ್ಣ, ಕುಮಾರ್, ದೇವೇಂದ್ರಪ್ಪ, ರಾಜಪ್ಪ, ರಾಮಯ್ಯ, ರಾಮಕೃಷ್ಣ, ಶಶಿಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net