ಶಿಕ್ಷಣಕ್ಕೆ ಒತ್ತು ನೀಡಿದ್ದ ಡಾ.ಶಿವಮೂರ್ತಿ ಶ್ರೀಗಳು

Untitled design (10)
Published on

ಮಾನ್ವಿ: ಕಲ್ಮಠದ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿ ಇತ್ತು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಮಹಾಶಿವರಾತ್ರಿ ಹಾಗೂ ಲಿಂ.ಗುರು ವಿರೂಪಾಕ್ಷ ಮಹಾಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಧ್ಯಾನಮಂದಿರದಲ್ಲಿ ಶುಕ್ರವಾರ ಮುಕ್ತಾಗುಚ್ಚ ಬೃಹನ್ಮಠ ಹಮ್ಮಿಕೊಂಡಿದ್ದ ಗಾರಿಗೆ ಜಾತ್ರೆ ಮಹೋತ್ಸವ ಮತ್ತು ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಗಳು ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಪಟ್ಟಣದಲ್ಲಿ ವೈದ್ಯಕೀಯ ಕಾಲೇಜ್, ಪದವಿ ಕಾಲೇಜ್‌ಗಳನ್ನು ಆರಂಭಿಸಿ ಈ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು ಎಂದರು.

ಗಾರಿಗೆ ಜಾತ್ರೆಯಲ್ಲಿ ಮಹಿಳೆಯರಿಗೆ ರಥ ಎಳೆಯುವ ಅವಕಾಶ ನೀಡಲಾಗಿದೆ. ಅಲ್ಲದೆ ಸಾಮೂಹಿಕ ವಿವಾಹ, ಇತರ ಸಮಾಜ ಸೇವೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಅದೇ ಮಾರ್ಗದಲ್ಲಿ ಈಗಿನ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಕಲ್ಮಠ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ನಾಟಕ ಪ್ರದರ್ಶನ, ರೂಪಕಗಳು ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮಾತನಾಡಿದರು. ಎಲೆಕೂಡ್ಲಿಗಿಯ ಬಸವರಾಜ ಶಾಸ್ತ್ರಿಗಳು ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ನಿಲಗಲ್ ಬೃಹನ್ಮಠದ ಡಾ.ಪಂಚಾಕ್ಷರ ಶಿವಾಚಾರ್ಯರು ಧರ್ಮ ಧ್ವಜಾರೋಹಣ ನೆರವೇರಿಸಿದರು. ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರಕ್ಕೆ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾಲಾರ್ಪಣೆ ಮಾಡಿದರು. ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು, ರಾಯಚೂರ ಮಂಗಳವಾರ ಪೇಟೆಯ ವೀರಸಂಗಮೇಶ್ವರ ಶಿವಾಚಾರ್ಯರು, ಅರಳಹಳ್ಳಿಯ ಶರಣಬಸವ ದೇವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net