

ಬೇಲೂರು: ಶಕ್ತಿ ಯೋಜನೆಯಿಂದ ಮಹಿಳೆಯರು ಸ್ವಾಭಿಮಾನದಿಂದ ಧಾರ್ಮಿಕ ಪುಣ್ಯಕ್ಷೇತ್ರಗಳಿಗೆ ತೆರಳುವಂತಾಗಿದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ರಾಜ್ಯ ಗ್ಯಾರಂಟಿ ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರ ಪರವಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನೆ ಸಮಿತಿಯಿಂದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾಭಿಮಾನದಿಂದ ಯಾವುದೇ ಅಡೆತಡೆ ಇಲ್ಲದೆ ಧಾರ್ಮಿಕ ಹಾಗೂ ವಿವಿಧ ಪುಣ್ಯಕ್ಷೇತ್ರಗಳಿಗೆ ತೆರಳುವಂತಹ ಉತ್ತಮ ಶಕ್ತಿ ಯೋಜನೆಯನ್ನು ಸರ್ಕಾರ ರೂಪಿಸಿದೆ. ಈ ಕ್ಷೇತ್ರದ ಶಾಸಕನಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಒಂದು ವೇಳೆ ಈ ಯೋಜನೆ ಇಲ್ಲದಿದ್ದರೆ ಮಹಿಳೆಯರು ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಿತ್ತು. ಈ ಯೋಜನೆಯ ಮೂಲಕ ತಾಲೂಕಿನ ಮತ್ತಷ್ಟು ಮಹಿಳೆಯರು ಇನ್ನು ಹೆಚ್ಚು ಹೆಚ್ಚು ಪುಣ್ಯ ಕ್ಷೇತ್ರಗಳಿಗೆ ತೆರಳಿ ಭಗವಂತನ ಆಶೀರ್ವಾದ ಪಡೆದು, ಅವರ ಕುಟುಂಬಗಳಲ್ಲಿ ಸಂತಸ ತರಲಿ. ಇದರ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳಲಿ ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಆನಂದ್ ದೇಶಾಣಿ ಮಾತನಾಡಿ, ಬೇಲೂರು ತಾಲೂಕಿನಲ್ಲಿ 77 ಲಕ್ಷದ 80 ಸಾವಿರ ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದರಿಂದ 59.26 ಕೋಟಿ ರೂ.ಗಳಷ್ಟು ಆದಾಯ ಬಂದಿದೆ. ಅಲ್ಲದೆ ಈ ಯೋಜನೆಯಿಂದ ಮಹಿಳೆಯರು ಹಲವಾರು ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದಾರೆ. ಇದರೊಂದಿಗೆ ಸರ್ಕಾರದ ಅನ್ನಭಾಗ್ಯ, ವಿದ್ಯಾಸಿರಿ, ಗೃಹಲಕ್ಷ್ಮ್ಮಿ ಯೋಜನೆಯಲ್ಲೂ ತಾಲೂಕಿನ ಜನತೆಗೆ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತಾಲೂಕಿನ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಬೇಲೂರು-ಹಳೇಬೀಡು ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ, ಕಾಂಗ್ರೆಸ್ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರಚನೆಯಾದ ದಿನದಿಂದ ಎರಡು ವರ್ಷದಲ್ಲಿ ಯಶಸ್ವಿಯಾಗಿ ಪೂರೈಸಿದೆ. ಅದೇ ರೀತಿ ಶಕ್ತಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಇದರ ಸದುಪಯೋಗವನ್ನು ಉತ್ತಮವಾಗಿ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್. ಸದಸ್ಯೆ ತೀರ್ಥಕುಮಾರಿ, ತಾಲೂಕು ಕೆಡಿಪಿ ಸದಸ್ಯರಾದ ಚೇತನ್‌ಗೌಡ. ನಂದೀಶ್. ಸೌಮ್ಯಾ ಆನಂದ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಿಶಾಲಾಕ್ಷಿ, ಪ್ರತಾಪ್, ಅಶೋಕ್, ಸತೀಶ್, ಚಂದ್ರಪ್ಪ, ಇಂದ್ರೇಶ್, ಅರ್ಬನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಮುಖಂಡರಾದ ರಂಗನಾಥ್, ನರಸಿಂಹ ಇತರರಿದ್ದರು.