ವಿರೋಧಿ ಬಣ ಛಿದ್ರ ಮಾಡಿದ ಶಾಸಕ ಜಿಟಿಡಿ

chamundeshwari_ JDS_ G.T.Devegowda MLA
Published on

ಬೆಳವಾಡಿ ಶಿವಮೂರ್ತಿ ಸೆಳೆಯುವಲ್ಲಿ ಸಫಲ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ತೊಡೆ ತಟ್ಟಿ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ‘ಪಂಚ ಪಾಂಡವರಲ್ಲಿ’ ಬಿರುಕು ಮೂಡಿದೆ.


2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದ ರಾಜಕೀಯದ ಹಾವು-ಏಣಿ ಆಟ ಮುಂದುವರಿದಿದ್ದು, ತಮ್ಮ ವಿರೋಧಿ ಬಣವನ್ನು ರಾತ್ರೋರಾತ್ರಿ ಛಿದ್ರ ಮಾಡುವಲ್ಲಿ ಜಿ.ಟಿ.ದೇವೇಗೌಡ ಯಶಸ್ವಿಯಾಗಿದ್ದರೆ. ಶಾಸಕರ ವಿರುದ್ಧ ತೊಡೆ ತಟ್ಟಿದ್ದ ‘ಪಂಚ ಪಾಂಡವರ’ ಪೈಕಿ ಪ್ರಭಾವಿ ಮುಖಂಡ ಬೆಳವಾಡಿ ಶಿವಮೂರ್ತಿ ಅವರನ್ನು ಜಿಟಿಡಿ ಮತ್ತೆ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರಾತ್ರಿ ಬೆಳವಾಡಿಯಲ್ಲಿ ಜಿ.ಟಿ.ದೇವೇಗೌಡರ ಹುಟ್ಟುಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ವೇದಿಕೆ ಹಂಚಿಕೊಂಡಿದ್ದ ಬೆಳವಾಡಿ ಶಿವಮೂರ್ತಿ ಹಾಗೂ ಜಿ.ಟಿ.ದೇವೇಗೌಡ ನಡುವಿನ ಮಾತುಕತೆ ಯಶಸ್ವಿಯಾಗಿದೆ.
ವೇದಿಕೆಯಲ್ಲಿ ಮಾತನಾಡಿದ ಬೆಳವಾಡಿ ಶಿವಮೂರ್ತಿ, ‘ನಾನು ಸೇರಿದಂತೆ ನನ್ನ ಕೆಲವು ಸ್ನೇಹಿತರು ವಿರೋಧ ಮಾಡಿದ್ದು ನಿಜ. ಆದರೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಣ್ಣ ಅವರ ತೀರ್ಮಾನವನ್ನು ನಾನು ಒಪ್ಪುತ್ತೇನೆ. ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ. ಮುಂದೆಯೂ ಜಿ.ಟಿ.ದೇವೇಗೌಡರ ಜತೆ ಇರುತ್ತೇನೆ’ ಎಂದಿದ್ದಾರೆ.
ಜೆಡಿಎಸ್ ವಿರುದ್ಧ ಬಂಡಾಯ ಎದ್ದಿರುವ ಮುಖಂಡರಾದ ಬೀರಿಹುಂಡಿ ಬಸವಣ್ಣ, ಕೆಂಪನಾಯಕ, ಮಾದೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಅವರ ಜತೆ ಬೆಳವಾಡಿ ಶಿವಮೂರ್ತಿ ಕೂಡ ಜಿಟಿಡಿ ವಿರುದ್ಧ ತೊಡೆ ತಟ್ಟಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಬಂಡಾಯ ನಾಯಕರು ಜಿ.ಟಿ.ದೇವೇಗೌಡರ ವಿರುದ್ಧ ಶಕ್ತಿ ಪ್ರದರ್ಶಿಸಿದ್ದರು.

ಇತ್ತೀಚೆಗೆ ಮೈಸೂರು ತಾಲೂಕಿನ ಕೇರ್ಗಳ್ಳಿ ಗ್ರಾಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ಜೆಡಿಎಸ್ ತೊರೆಯುವ ತೀರ್ಮಾನ ಪ್ರಕಟಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದರು. ಜತೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದರು.
ಆದರೆ ಇದೀಗ ಬೆಳವಾಡಿ ಶಿವಮೂರ್ತಿ, ಜಿ.ಟಿ.ದೇವೇಗೌಡರ ಜತೆ ಇರಲು ಮುಂದಾಗಿದ್ದು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net