

ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನರೇಂದ್ರ ಮೋದಿ ಅವರಷ್ಟು ಶಕ್ತಿ ಸಾಮರ್ಥ್ಯವಿಲ್ಲ. ಹೀಗಾಗಿ ನರೇಂದ್ರ ಮೋದಿಯೇ ಪ್ರಧಾನಿ ಸ್ಥಾನಕ್ಕೆ ಸೂಕ್ತವಾದವರು ಎಂಬ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆ ಖಂಡನೀಯ ಎಂದು ಮಾಜಿ ಮೇಯರ್ ಪುರುಷೋತ್ತಮ್ ಕಿಡಿಕಾರಿದರು.
ಖರ್ಗೆ ಅವರು ತಮ್ಮ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ ಹೊಂದಿದವರಲ್ಲ. ಜೆಡಿಎಸ್‌ಗೆ ಸ್ವಂತ ಶಕ್ತಿ ಮೇಲೆ ಆಡಳಿತ ನಡೆಸುವ ಸಾಮರ್ಥ್ಯವಿಲ್ಲ. ಜಿ.ಟಿ.ದೇವೇಗೌಡರ ಕ್ಷೇತ್ರದಲ್ಲಿಯೇ ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದೇ ರೀತಿ ಖರ್ಗೆ ಅವರನ್ನು ಟೀಕಿಸುವ ಮೂಲಕ ಜಿ.ಟಿ.ದೇವೇಗೌಡ ಪರೋಕ್ಷವಾಗಿ ಅಸ್ಪೃಶ್ಯತೆ ಆಚರಿಸುತ್ತಿರುವಂತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿ.ಟಿ.ದೇವೇಗೌಡ ಅಡ್ಡ ಮಾರ್ಗದಲ್ಲಿ ರಾಜಕೀಯ ನಡೆಸುತ್ತಿರುವವರು. ತಮಗೆ ನೆರವಾದವರ ಪಕ್ಷ ಸೇರುವವರು. ಹೀಗಾಗಿ ಖರ್ಗೆ ಅವರನ್ನು ಮೋದಿಗೆ ಹೋಲಿಸುವ ನೈತಿಕತೆ ಇವರಿಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸೋಮಯ್ಯ ಮಲೆಯೂರು, ಸುನೀಲ್ ಕುಮಾರ್ ಇತರರಿದ್ದರು.