

‘ಈ ಹಿಂದೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಅವರಿಗೆ ಪೌರತ್ವ ನೀಡಬಾರದೆಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಈಗ ಸೋನಿಯಾ ಗಾಂಧಿ ಅವರ ಅಡಿಯಲ್ಲಿಯೇ ಇದ್ದಾರೆ’ ಎಂಬ ಶಾಸಕ ಜಿ.ಟಿ.ದೇವೇಗೌಡ ಅವರ ಹೇಳಿಕೆ ಖಂಡನೀಯ ಎಂದು ಮುಡಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಿ.ಬಸವೇಗೌಡ ಕಿಡಿ ಕಾರಿದರು.
ಇತ್ತೀಚಿನ ರಾಜಕೀಯ ವಿದ್ಯಮಾನಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ. ಸಿದ್ದರಾಮಯ್ಯ ಅವರನ್ನು ಜನತಾ ದಳದಿಂದ ಕೈಬಿಟ್ಟ ಮೇಲೆ ಅನಿವಾರ್ಯವಾಗಿ ಅವರು ಕಾಂಗ್ರೆಸ್ ಸೇರಿದ್ದಾರಲ್ಲದೆ, ಪಕ್ಷದಲ್ಲಿ ತಾವು ಮಾಡಿದ ಕೆಲಸಗಳಿಂದಾಗಿ ಈಗಿನ ಸ್ಥಾನಮಾನ ಗಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿ.ಟಿ.ದೇವೇಗೌಡ ಅವರು ಜನತಾ ದಳದಲ್ಲಿದ್ದಾಗ ಎಲ್ಲವನ್ನೂ ಅನುಭವಿಸಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಅವರು, ಬಳಿಕ ಚುನಾವಣೆ ವೇಳೆ ಎಚ್.ಡಿ.ದೇವೇಗೌಡರ ಕುಟುಂಬವನ್ನೆಲ್ಲ ಬೈದುಕೊಂಡು ಬಿಜೆಪಿ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಎಚ್.ಡಿ.ದೇವೇಗೌಡ ಅವರ ಕುಟುಂಬವನ್ನು ಓಲೈಸಿಕೊಂಂಡು ಮತ್ತೆ ಜನತಾ ದಳದಿಂದ ಸ್ಪರ್ಧಿಸಿ ಗೆದ್ದಿರುವುದು ಎಲ್ಲರಿಗೂ ತಿಳಿದ ವಿಷಯ ಎಂದು ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ತಾವೇ ಸೋಲಿಸಿದ್ದಾಗಿ ಜಿ.ಟಿ.ದೇವೇಗೌಡ ಅಹಂನಿಂದ ಹೇಳಿದ್ದಾರೆ. ಕಾಂಗ್ರೆಸ್ ವಿರೋಧಿ ಅಲೆ ಹಾಗೂ ವರುಣ ಕ್ಷೇತ್ರ ಬಿಟ್ಟು ಬಂದಿದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸೋಲಬೇಕಾಯಿತು ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡ ಈಶ್ವರ ಚಕ್ಕಡಿ, ಮಾಧ್ಯಮ ವಕ್ತಾರ ಕೆ.ಮಹೇಶ್ ಹಾಜರಿದ್ದರು.