ಶಾಸಕರ ಮುನಿಸು, ಕಣಿವೆ ನೀರಿನ ಯೋಜನೆಯ ಅನುಮೋದನೆಗೆ ಸರ್ಕಾರ ಅಸ್ತು

IMG-20250704-WA0060.jpg
Published on

ಚಿಕ್ಕಬಳ್ಳಾಪುರ: ಫ್ಲೋರೈಡ್‌ ನೀರಿನ ಸೇವನೆಯಿಂದ ತತ್ತರಿಸಿರುವ ಬಾಗೇಪಲ್ಲಿ ತಾಲೂಕಿನಲ್ಲಿ ಘಂಟಲಮಲ್ಲಮ್ಮ ಕಣಿವೆ ನೀರಾವರಿ ಯೋಜನೆಗೆ ಅನುದಾನ ಪಡೆಯುವಲ್ಲಿ ಸ್ಥಳೀಯ ಶಾಸಕರ ಮುನಿಸು ಪ್ರದರ್ಶನಗೊಂಡಿದೆ.
ಹೌದು! ರಾಜ್ಯ ಸಚಿವ ಸಂಪುಟದ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ಕೇವಲ ಭಾಗ್ಯನಗರ ಊರಿನ ಹೆಸರನ್ನು ಬದಲಾಯಿಸಿದ ಘೋಷಣೆಯ ಮೂಲಕ ಬಾಗೇಪಲ್ಲಿಯನ್ನು ತೃಪ್ತಿಪಡಿಸಲು ಸರ್ಕಾರ ಮುಂದಾಗಿತ್ತು. ಘಂಟ್ಲಮಲ್ಲಮ್ಮ ಕಣಿವೆ ನೀರಾವರಿ ಯೋಜನೆಯ ವಿಚಾರವು ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ವಾಗತಿಸಿದ ಬಳಿಕ ಮುನಿಸಿನಲ್ಲಿ ದೂರ ಉಳಿದುಕೊಂಡರು. ನಂದಿ ಬೆಟ್ಟದಲ್ಲಿನ ಸುದ್ದಿಗೋಷ್ಠಿಗೂ ಬರಲಿಲ್ಲ. ಇದರ ಬಗ್ಗೆ ಮಾಹಿತಿ ಅರಿತ ಸಿಎಂ, ಡಿಸಿಎಂ ಇತರ ವಿಷಯಗಳಲ್ಲಿ ಯೋಜನೆಯನ್ನು ಸೇಪರ್ಡೆಗೊಳಿಸಿ, ಅನುಮೋದನೆ ನೀಡಿರುವುದನ್ನು ಘೋಷಿಸಿ ಸಮಾಧಾನಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

*೧೮೯ ಕೋಟಿ ರೂ ಮಂಜೂರು
ಘಂಟಲಮಲ್ಲಮ್ಮ ಕಣಿವೆ ಯೋಜನೆಗೆ ೧೮೯ ಕೋಟಿ ರೂ ಮಂಜೂರಾಗಿದೆ. ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹಾಗೂ ಚೇಳೂರು ಭಾಗದ ಜನರು ಮೊದಲಿನಿಂದಲೂ ಈ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿಕೊಂಡು ಬಂದಿದ್ದಾರೆ. ಇದಕ್ಕೆ ಶಾಸಕರು ಹಿಂದಿನ ಸರ್ಕಾರದ ಆಡಳಿತದ ಅವಧಿಯಲ್ಲೂ ಮಂಜೂರಾತಿ ಪಡೆಯಲು ಕಸರತ್ತು ನಡೆಸಿದ್ದರು. ಆದರೆ, ಪ್ರಾರಂಭದಲ್ಲಿ ನಾನಾ ಷರತ್ತುಗಳೊಂದಿಗೆ ಸ್ಪಂದನೆ ಸಿಕ್ಕಿದರೂ ಸಹ ಕೊನೆ ಹಂತದಲ್ಲಿ ಒಪ್ಪಿಗೆ, ನಿರೀಕ್ಷೆಯ ಅನುದಾನ ಸಿಕ್ಕಿರಲಿಲ್ಲ. ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಒತ್ತಡವನ್ನು ಹೆಚ್ಚಿಸಿದ್ದು ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ. ಈಗ ೧೮೯ ಕೋಟಿ ರೂ ಮಂಜೂರಾಗಿದೆ.

ಘಂಟ್ಲಮಲ್ಲಮ್ಮ ಅಣೆಕಟ್ಟು
ಬಾಗೇಪಲ್ಲಿ ತಾಲೂಕಿನ ಪಾತಕೋಟೆ ಸಮೀಪದ ಬೆಟ್ಟಗುಡ್ಡಗಳಲ್ಲಿ ಬಿದ್ದ ನೀರು ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಹರಿದು ಹೋಗುತ್ತದೆ. ಇಲ್ಲಿ ಅಣೆಕಟ್ಟನ್ನು ನಿರ್ಮಿಸಿ, ಇಲ್ಲಿ ಸಂಗ್ರಹವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಪಾತಪಾಳ್ಯದ ಭಾಗಗಳಿಗೆ ಹರಿಸುವ ಯೋಜನೆ ರೂಪಿಸಲಾಗಿದೆ. ಮೊದಲು ಇಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ೧೨೦ ಕೋಟಿ ರೂ ವಿಸ್ಕೃತ ಯೋಜನಾ ವರದಿಯನ್ನು (ಡಿಪಿಆರ್‌) ವಿಶ್ವೇಶ್ವರಯ್ಯ ಜಲ ನಿಗಮವು ರೂಪಿಸಿತ್ತು. ಅರಣ್ಯ ಇಲಾಖೆಯ ಜಮೀನು ಬಳಕೆಗೆ ವಿರೋಧ, ಅನುದಾನ ಮಂಜೂರಾತಿ ವಿಳಂಬ ಸೇರಿದಂತೆ ನಾನಾ ಅಪಸ್ವರಗಳು ಪ್ರಾರಂಭದಲ್ಲಿ ಎದ್ದಿದ್ದವು. ಇನ್ನು ವರ್ಷಗಳು ಕಳೆದಂತೆ ಅಂದಾಜು ಯೋಜನಾ ವೆಚ್ಚವು ಹಂತ ಹಂತವಾಗಿ ಏರಿಕೆಯಾಗಿದೆ. ಈ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಅನುದಾನದ ಹೊರೆಯು ಕಡಿಮೆಯಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

*ಇತರ ವಿಷಯಗಳ ಕಾರ್ಯಸೂಚಿ
ಜೂ.೧೯ ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆಗೆ ಜಿಲ್ಲೆಯ ಶಾಸಕರ ನಿರೀಕ್ಷೆಯ ಹಲವು ಯೋಜನೆಗೆ ಅನುಮೋದನೆ ಸಿಗದಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆಯಿಲ್ಲದೇ ತರಾತುರಿಯಲ್ಲಿ ಕೋಟ್ಯಂತರ ರೂ ಅನುದಾನವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಅಧಿಕಾರಿಗಳು ತಕರಾರು ತೆಗೆದಿದ್ದರು. ಇದಕ್ಕೆ ಉನ್ನತ ಮಟ್ಟದಲ್ಲಿ ಚರ್ಚೆ, ಹಣ ಹೊಂದಾಣಿಕೆ ಹಿತದೃಷ್ಟಿಯಿಂದ ಜು.೨ ಕ್ಕೆ ಮತ್ತೆ ಸಭೆಯನ್ನು ನಿಗದಿಪಡಿಸಲಾಗಿತ್ತು. ಇದರ ವೇಳೆಯೂ ಘಂಟ್ಲಮಲ್ಲಮ್ಮ ಕಣಿವೆ ಯೋಜನೆಯನ್ನು ಪ್ರಾರಂಭದಲ್ಲಿ ಕೈ ಬಿಡಲಾಗಿತ್ತು. ಕೊನೆಗೆ ಸಿಎಂ ಇತರ ವಿಷಯಗಳ ಚರ್ಚೆಯಡಿ ಅನುಮೋದನೆ ನೀಡಿರುವ ಘೋಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net